ಮೊನ್ನೆ ಚಂದ್ರಗ್ರಹಣ ಸಂಭವಿಸಿದಾಗ ಚಂದಿರನ ಲೋಕಕ್ಕೆ ಜಾರಿದೆ. ಆದ್ರೆ, ಗ್ರಹಣದ ಕುರಿತ ಮೂಢನಂಬಿಕೆಗಳು ತುಂಬಾ ಗೊಂದಲಕ್ಕೀಡುಮಾಡಿತ್ತು. ಗೊಡ್ಡು ಕಥೆಗಳ ಬಗ್ಗೆ ಬೇಸರ ಹುಟ್ಟಿತ್ತು.. ಗ್ರಹಣಕಾಲದಲ್ಲಿ ಊಟ ಮಾಡಬಾದರು, ಹೊರಗಡೆ ಹೋಗಬಾರದು, ಚಂದ್ರನನ್ನ ನೋಡಬಾರದು.... ಹೀಗೆ ಒಂದಾ, ಎರಡಾ..? ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇತ್ತು.
ಆದ್ರೆ, ಆಗಿದ್ದು ಆಗ್ಲಿ ( ಏನೂ ಆಗಲ್ಲ ಅಂತಾ ಗೊತ್ತು..!) ನಾನು ಮಾತ್ರ ಚಂದ್ರಗ್ರಹಣವನ್ನ ನೋಡಲೇಬೇಕೆಂದು ಶಪಥ ಮಾಡಿದ್ದೆ.. ಪ್ರಕೃತಿ ವಿಸ್ಮಯದ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದೆ. ಸಾಯಂಕಾಲ ಆಗುತ್ತಿದ್ದಂತೆ ಟೆರೆಸ್ ಹತ್ತಿ ಕುಳಿತಿದ್ದೆ.. ನಿಗದಿತ ಸಮಯಕ್ಕೆ ಬಾನಂಚಿನಲ್ಲಿ ಚಂದ್ರ ನಿಧಾನವಾಗಿ ಬಂದ.. ಸುತ್ತಲೂ ಕೆಂಪು ಪ್ರಭಾವಲಯ. ನೀರವ ರಾತ್ರಿಯಲ್ಲಿ ಚಳಿಗಾಳಿಯ ಮಧ್ಯೆ ನೀಲಿಯಾಕಾಶವನ್ನ ನೋಡೋದೆ ರೋಮಾಂಚನ.. ಮನಸ್ಸಿಗೆಲ್ಲ ಕಚಗುಳಿಯಾದ ಅನುಭವ.. ಏಕಾಂಗಿಯಾಗಿ, ಏಕಾಗ್ರತೆಯಿಂದ ಆಕಾಶ ನೋಡುತ್ತಲೇ ನಿಂತಿಬಿಟ್ಟೆ.. ಚಂದ್ರಗ್ರಹಣ ನೋಡಿ ಖುಷಿಪಟ್ಟೆ. ಕತ್ತಲು ಆವರಿಸಿದಂತೆ ಚಂದ್ರನನ್ನ ಛಾಯೆಗಳು ಆವರಿಸಿದವು. ಹಾಗೆಯೇ ಪೂರ್ತಿ ಗ್ರಹಣವನ್ನ ವೀಕ್ಷಿಸಿದೆ.. ಪ್ರಕೃತಿ ವೈಚಿತ್ರ್ಯಕ್ಕೆ ಬೆರಗಾದೆ. ದಂಗಾದೆ. ಚಂದಮಾಮನ ಕ್ಲೋಸಪ್ ಚಿತ್ರಗಳೇ ಮನಸ್ಸನ್ನ ಆವರಿಸಿದ್ದವು.. ಬಂದು ಮಲಗಿದರೂ, ಮನದಲ್ಲಿ ಚಂದಿರ ಬೆಳಗುತ್ತಿದ್ದ..
ಇಲ್ಲಿ ಒಂದು ಮಾತನ್ನ ಹೇಳಲೇಬೇಕು. ಚಂದ್ರಗ್ರಹಣದ ಹಿಂದಿನ ದಿನ ಮಾಧ್ಯಮದಲ್ಲಿ ಸಾಧಕ-ಬಾಧಕಗಳದ್ದೇ ಚರ್ಚೆ. ಜ್ಯೋತಿಷಿಗಳಿಂದ ವಿಶ್ಲೇಷಣೆ.. ಆ ನಕ್ಷತ್ರದವರಿಗೆ ಕೆಡುಕಾಗುತ್ತೆ.. ಈ ರಾಶಿಯವರಿಗೆ ಒಳ್ಳೆಯದು.. ಇನ್ನೊಂದು ಕಡೆ ದುರ್ಬಲ ಮನಸ್ಸಿನ ಒಂದಿಷ್ಟು ಜನ ಫೋನ್ ನಲ್ಲಿ ಪರಿಹಾರ ಕೇಳುತ್ತಿದ್ರು. ಗೋದಾನ ಮಾಡಬೇಕು, ಬಟ್ಟೆದಾನ ಮಾಡಬೇಕು ಅನ್ನೊ ಉತ್ತರ ಜ್ಯೋತಿಷಿಗಳದ್ದು.. ಜನರು ಇಂಥದನ್ನ ನಂಬುತ್ತಾರೆಯೇ ಅಂತಾ ಅಚ್ಚರಿಯಾಯ್ತು..!
ನನಗೆ ಜ್ಯೋತಿಷ್ಯದ ಶಕ್ತಿಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಆದ್ದರಿಂದ ಅದರಲ್ಲಿ ದೋಷವಿದೆ ಅಂತಾ ಹೇಳಲಾರೆ.. ಆದ್ರೆ, ಧರ್ಮದ ಹೆಸರಿನಲ್ಲಿ ಮೂಢನಂಬಿಕೆಗಳನ್ನ ಹೇರುವುದು ಎಷ್ಟು ಸರಿ.? ವೇದ, ಪುರಾಣ, ಧರ್ಮದ ಹೆಸರಿನಲ್ಲಿ ಅಂಧಾಚರಣೆ ಯಾಕೆ..?
ವಿಷ್ಣು ಹೆಗಡೆ , ಕುಮಟಾ
