Friday, December 2, 2011

ಕಣ್ಣಿಗೆ ಕಾಣುವ ದೇವರು...


ಆಫೀಸ್ನಲ್ಲಿ ಒತ್ತಡ ಜಾಸ್ತಿಯಾದಾಗ, ಹಿತಶತ್ರುಗಳು ಕಿರಿಕಿರಿ ಮಾಡಿದಾಗ, ಕೈಕೊಟ್ಟು ಹೋದ ಗೆಳೆಯ-ಗೆಳೆತಿಯರು ಕಾಡಿದಾಗ, ಜಂಜಾಟಗಳಿಂದ ಬದುಕು ಭಾರವಾದಾಗ, ಯಾರಲ್ಲೂ ಹೇಳಿಕೊಳ್ಳದ ದು:ಖ ಅಪ್ಪಳಿಸಿದಾಗ, ಅಮ್ಮನ ನೆನಪಾಗುತ್ತೆ.. ಕ್ಷಣ ಮಾತ್ರದಲ್ಲೇ ಮನಸ್ಸು ಮಲ್ಲಿಗೆಯಾಗುತ್ತೆ.. ಹೃದಯ ತಂಪಾಗುತ್ತೆ. ಹಗುರವಾಗುತ್ತೆ. ಬದುಕೆಲ್ಲಾ ನಾದಮಯ ಅನಿಸಿ ಬಿಡುತ್ತೆ. ಮನಸ್ಸಿನಾಳದಿಂದ ಉಕ್ಕೆದ್ದು ಬರುವ ಉದ್ವೇಗ ಕರಗಿಹೋಗುತ್ತೆ.. ಅದ್ಕೆ ಹೇಳೋದು ಅಮ್ಮ ಕಣ್ಣಿಗೆ ಕಾಣುವ ದೇವರು ಅಂತಾ..

ಇತ್ತಿಚೆಗೆ ಊರು ದೂರವಾದಷ್ಟು, ಮನಸ್ಸು ಭಾರವಾಗಿದೆ.. ಏಕಾಂತ ಕಾಡ್ತಿದೆ. ಮೊಗದ ಮುದ್ದಾದ ನಗು ಮಾಯವಾಗಿದೆ. ಅಮ್ಮನ ಪ್ರೀತಿ, ಅಪ್ಪನ ಅಕ್ಕರೆ, ತಂಗಿಯ ಪುಟ್ಟನಗೆ ನೆನಪಾಗ್ತಿದೆ. ಮನೆಯ ಕಡೆ ಮನಸ್ಸು ವಾಲುತ್ತಿದೆ..

ಮನೆಗೆ ಫೋನ್ ಮಾಡುವಾಗಲೆಲ್ಲಾ ಮೊದ್ಲು ನೆನಪಾಗೋದು ಅಮ್ಮನ ಮುಖ. ಅವಳ ಒಲವಿನ ಘಮ.. ಪ್ರೀತಿಯ
ಅಪ್ಪುಗೆ. ಒಬ್ಬನೇ ಕೂತು ತನ್ನ ಬಗ್ಗೆ ಯೋಚಿಸುವಂತೆ ಮಾಡುವ ಶಕ್ತಿ ಅವಳ ನಿಷ್ಕಲ್ಮಶ ಒಲವಿದೆ. ಒಮ್ಮೆಮ್ಮೊಯಂತೂ ಅಮ್ಮನನ್ನ ಬಾಚಿ ತಬ್ಬಿ, ಅವಳ ಮಡಿಲಲ್ಲಿ ಬಿಕ್ಕಿ ಬಿಕ್ಕಿ ಅತ್ತುಬಿಡಬೇಕು ಅನ್ನೋ ಮೌನಯಾತನೆ.

ಹೊಟೇಲ್ಗೆ ಹೋದರೂ ಅಮ್ಮನದ್ದೇ ನೆನಪು.. ಅಡುಗೆ ಎಷ್ಟೇ ಚೆಂದವಿದ್ದರೂ ಬಡಿಸುವ ಕೈ ಆಪ್ತವೆನಿಸುವುದಿಲ್ಲ. ಅನ್ನದಲ್ಲಿ ಪ್ರೀತಿಯ ಸುಳಿವಿರೋದಿಲ್ಲ. ಸೋಮವಾರದ ಹೋಳಿಗೆ ಊಟ ಕೂಡಾ, ಒಲಿನ ತಂಬ್ಳಿ( ಮಜ್ಜಿಗೆ ಸಾರು) ಮುಂದೆ ಸಪ್ಪೆ.. ಎಲ್ಲರೂ ಒಟ್ಟಾಗಿ ಕೂತು, ಸುದ್ದಿ ಹೇಳ್ತಾ , ತಮಾಷೆ ಮಾಡ್ತಾ ಇದ್ರೆ ಊಟಮಾಡಿದ್ದೆ ಗೊತ್ತಾಗದಂತೆ ಕಣ್ಣೆದುರಿಗಿನ ತಟ್ಟೆ ಬರಿದಾಗುವ ಆ ಮೋಡಿಯೇ ಸೊಬಗು.

ವಿಷ್ಣು ಹೆಗಡೆ, ಕುಮಟಾ