ನಮ್ಮ ರೂಮ್ನ ಎದುರುಗಡೆ ಮತ್ತೊಂದು ರೂಮ್ ಇದೆ.. ಮೂವರು ನೇಪಾಳಿಗಳು ಅಲ್ಲಿದ್ದಾರೆ.. ಇಬ್ಬರು ಹುಡುಗಿಯರು, ಒಬ್ಬ ಹುಡುಗ.. ಲಿವಿಂಡ್ ಟುಗೆದರ್ ಅಲ್ಲ, ಲಿವಿಂಗ್ ತ್ರಿಗೆದರ್..! ಸುಮಾರು ಒಂದು ವರ್ಷದಿಂದ ಅದೇ ರೂಮ್ನಲ್ಲಿದ್ದಾರೆ. ಎಷ್ಟೊತ್ತಿಗೆ ಹೋಗ್ತಾರೆ, ಬರ್ತಾರೆ ಅಂತಾ ಯಾರಿಗೂ ಗೊತ್ತಿಲ್ಲ.. ತಿಂಗಳಿಗೆ ಮೂರ್ನಾಲ್ಕು ಬಾರಿ ಮಾತ್ರ ದರ್ಶನ.. ಅದ್ ಬಿಟ್ರೆ, ಯಾವಾಗ್ಲೂ ಡೋರ್ ಕ್ಲೋಸ್.. ಆದ್ರೆ , ಬೆಳಿಗ್ಗೆ ಬಾಗಿಲು ತೆಗೆದ್ರೆ ಸಾಕು ವಿಸ್ಕಿ, ರಮ್, ಬಿಯರ್ ಬಾಟ್ಲಿಗಳು, ಸಿಗರೇಟ್ ಪ್ಯಾಕ್ಗಳು, ರಾಶಿ ರಾಶಿ ತಿಂಡಿ ಪೊಟ್ಟಣಗಳು ಕಣ್ಣಿಗೆ ತಟ್ಟುತ್ತೆ.. ಗಾರ್ಬೇಜ್ ತೆಗೆದುಕೊಂಡು ಹೋಗ್ಲಿಕ್ಕೆ ಬರೋರು, "ಏನಪ್ಪಾ, ಇಷ್ಟು ಗಲೀಜು ಮಾಡ್ತಿರಾ" ಅಂತಾ ಬಯ್ಯೋದು ನಮ್ಗೆ. ನೋಡಿ ಸರ್ ನಾವು ರೂಮ್ನಲ್ಲಿ ಅಡುಗೇನು ಮಾಡಲ್ಲ.. ಪ್ರತಿ ದಿನ ಹೊರಗಡೆನೆ ತಿನ್ನೋದು.. ಇದೆಲ್ಲ ಎದುರುಗಡೆಯ ಮಹಿಮೆ ಅಂತಾ ಹೇಳಿದೆವು.. ಒಂದೆರೆಡು ದಿನ ನಮ್ಮ ಮೇಲೆಯೇ ಸಂಶಯ ಪಟ್ಟ.. ಆದ್ರೆ, ಆಮೇಲೆ ಆತನಿಗೆ ಅರ್ಥವಾಯ್ತು..
ಯಾವಾಗ್ಲೂ ರೂಮ್ನಲ್ಲಿ ರಾಕ್ ಮ್ಯೂಜಿಕ್.. ಗಿಟಾರ್ ಸದ್ದು.. ಎಲ್ಲರಿಗೂ ಡಿಸ್ಟರ್ಬ್ ಆಗೋ ತರ.. ಒಮ್ಮೆ, ರಾತ್ರಿ 12 ಗಂಟೆ..
ಸ್ನೇಹಿತ ಬಾಲು ರೂಮ್ಗೆ ಬಂದಿದ್ದ.. ನಾವಿಬ್ಬರೂ ಊಟ ಮಾಡಿ ಹರಟುತ್ತಾ ಕೂತಿದ್ದೇವು.. ಎದುರುಗಡೆಯ ರೂಮ್ನಿಂದ ತುಂಬಾ ಸೌಂಡ್ ಬರ್ತಿತ್ತು.. ಸುಮ್ಮನಿದ್ದೇವು.. ಆದ್ರೆ, ಪಕ್ಕದ ಮನೆಯವ್ರು ಕೇಳಬೇಕಲ್ಲ.. ಓನರ್ಗೆ ಕಂಪ್ಲೆಂಟ್ ಮಾಡಿದ್ರು.. ನಡುರಾತ್ರಿ ಸಿಟ್ಟಿನಲ್ಲಿ ಬಂದ ಓನರ್, ಅವ್ರ ಪಾರ್ಟಿಯನ್ನ ನೋಡಿ ಕಂಗಾಲು.. ನಾವೂ ಕೂಡಾ.. ಏನಿಲ್ಲ ಅಂದ್ರೂ 10-12 ಮಂದಿ ಅಲ್ಲಿದ್ರು.. ಎಲ್ಲರೂ ಸಿಕ್ಕಾಪಟ್ಟೆ ಕುಡಿದು ರಾಕ್ ಮ್ಯೂಜಿಕ್ಗೆ ಹೆಜ್ಜೆ ಹಾಕ್ತಿದ್ರು.. " ನೋಡಿ, ಎಂಜಾಯ್ ಮಾಡಿ. ಆದ್ರೆ, ನಡುರಾತ್ರಿ ಇಷ್ಟೊಂದು ಗಲಾಟೆ ಮಾಡೋದು ಸರಿಯಲ್ಲ" ಅಂತಾ ಹೇಳಿದ್ದಕ್ಕೆ ಓವರ್ ಮೇಲೆ ರೇಗಿಬಿಟ್ರು.. "ಈ ಇಂಡಿಯನ್ ಪೀಪಲ್ಗಳೇ ಸಿಲ್ಲಿ ಮೈಂಡ್" ಅಂತಾ ಮದಿರೆ ಮತ್ತಿನಲ್ಲಿ ತೇಲುತ್ತಿದ್ದ ಹುಡುಗಿಯೊಬ್ಬಳು ಹೇಳಿದ್ದೆ ತಡ ಓನರ್ ಸಿಟ್ಟು ನೆತ್ತಿಗೇರಿತ್ತು.. ನಡುರಾತ್ರಿಯೇ ಎಲ್ಲರನ್ನ ಹೊರಹಾಕಿದ್ರು.. ಎಷ್ಟೆ ಪ್ರತಿಭಟಿಸಿದ್ರು, ಬೇಡಿಕೊಂಡರೂ ಕೇಳಲೇ ಇಲ್ಲ.. ಆ ಕಡೆ ಮನೆ, ಈ ಕಡೆ ಮನೆಯವ್ರು ಎಲ್ಲಾ ಸೇರಿಬಿಟ್ರು.. ಗಲಾಟೆ ಮಾಡುತ್ತಿದ್ದ ಹುಡುಗರಿಬ್ಬರಿಗೆ ಕಪಾಳಮೋಕ್ಷವೂ ಆಯ್ತು.. ಗೊಣಗುತ್ತಾ, ತೂರಾಡುತ್ತಾ ರಸ್ತೆಯಲ್ಲಿ ಮರೆಯಾದ್ರು..
ಮರುದಿನ ಬೆಳಿಗ್ಗೆ ಆಶ್ಚರ್ಯ..! ಕಾಫಿ ಕುಡಿದು ಬರ್ಬೇಕಾದ್ರೆ ಎದುರುಗಡೆ ರೂಮ್ನ ಬಾಗಿಲು ತೆಗೆದಿತ್ತು.. ಬೇರೆ ಯಾರೋ ಬಂದಿರಬೇಕು ಅಂದ್ಕೊಂಡೆ.. ಇಲ್ಲ.. ಅವರೇ.!! ರಾತ್ರಿ ಕುಡಿದು ಗಲಾಟೆ ಮಾಡಿದವರೆ..! ರೂಮ್ ಖಾಲಿ ಮಾಡ್ಲಿಕ್ಕೆ ಬಂದಿರಬೇಕು ಅಂದ್ಕೊಂಡೆ.. ಎಷ್ಟೊತ್ತಾದ್ರು ಜಾಗ ಖಾಲಿ ಮಾಡ್ಲಿಲ್ಲ.. ಮಧ್ಯಾಹ್ನ ಊಟ ಮಾಡಿ ಆಫೀಸ್ಗೆ ಹೊರಟೆ.. ರಸ್ತೆಯಲ್ಲಿ ಹೋಗುವಾಗ ಅಂಕಲ್ ಹೇಳಿದ್ರು.. ಬೆಳಿಗ್ಗೆ ಬೆಳಿಗ್ಗೆ ಬಂದು ಓನರ್ಗೆ ಸಾರಿ ಕೇಳಿದ್ದಾರೆ.. ಇನ್ಮುಂದೆ ಗಲಾಟೆ ಮಾಡಲ್ಲ ಅಂತಾ ಭರವಸೆನೂ ಕೊಟ್ಟಿದ್ದಾರಂತೆ.. ಅದ್ಕೆ ಓನರ್ ಮತ್ತೆ ರೂಮ್ ಕೊಟ್ಟಿದ್ದಾರೆ ಅಂತಾ ತಿಳಿದು ಸುಮ್ಮನಾದೆ..
ಇಷ್ಟೆಲ್ಲಾ ಆದ್ ಮೇಲೆ ಎದುರುಗಟೆಯ ಕಾಟ ಕಡ್ಮೆಯಾಗಿದೆ.. ಹೊರಗಡೆ ಕಸ ಚಲ್ಲೋದಿಲ್ಲ.. ಮ್ಯೂಜಿಕ್ ಸೌಂಡ್ ಬಾಗಿಲು ದಾಟಿ ಬರುತ್ತಿಲ್ಲ.. ಅಕ್ಕಪಕ್ಕದವರಿಗೂ ನೆಮ್ಮದಿ.. ನಮಗೂ..!
ವಿಷ್ಣು ಹೆಗಡೆ, ಕುಮಟಾ

