Sunday, December 4, 2016

ಇಬ್ಬನಿಯ ಚಿತ್ತಾರ


 







ಮುಂಜಾವಿನ ಮುಸುಕಲ್ಲಿ
ಕಾಡಂಚಿನಲಿ
ಹತ್ತಿಹರಡಿದಂತೆ ಕಾಣುವ
ಇಬ್ಬನಿಯ ಚಿತ್ತಾರ
ಹೂಬಿಸಿಲ ಹೊಳಪಿನಲಿ
ಎಲೆಯಂಚಿನಲಿ
ಬೆಳಕು ಬೆರಗಿನ ಶೃಂಗಾರ 


- ವಿಷ್ಣು ಹೆಗಡೆ, ಕುಮಟಾ

ಬಿರಿದ'ಮನ'...

ಬಿರುಕುಬಿಟ್ಟಿದೆ ಮನ
ಒಣ ಚರ್ಮದಂತೆ
ತೇವವಿಲ್ಲದ
ಶುಷ್ಕ ಗಾಳಿಗೆ ಸಿಲುಕಿ
ಈ ಬೇಗೆಯಲಿ ಬೆಂದು
ಎದೆಯುಸಿರು
ಬಿಸಿಯಾಗಿಹುದು
ಬಿಸಿಯ ಬೇಗೆ
ಉಸಿರುಗುಟ್ಟುವ ಮುನ್ನ
ತಣಿಸು ತನುಮನವ
ಓ ತಂಗಾಳಿಯೇ


- ವಿಷ್ಣು ಹೆಗಡೆ, ಕುಮಟಾ

Saturday, November 26, 2016

ಈ ಚಳಿಯ ತಾಳೇನು?


ಈ ಚಳಿಯ ಸೊಬಗು
ಉಳ್ಳವರಿಗಷ್ಟೆ ಬೆರುಗು

ಬೆಚ್ಚನೆಯ ಮನೆಯೊಳಗೆ
ದಪ್ಪನೆಯ ರಗ್ಗು-ಗುಡಾರ
ಹೊದ್ದು ಮುದುಡಿ 
ಮಲಗಿದ್ದವರಿಗೆ 
ಈ ಚಳಿಯ ಸೊಬಗು 
ಬಲು ಬೆರುಗು

ಪ್ರಯಣ ಪಕ್ಷಿಗಳಿಗೆ
ಪ್ರವಾಸಿಗಳಿಗೆ 
ವೀಕೆಂಡ್ ಪ್ರಿಯರಿಗೆ
ಈ ಚಳಿಯ ಸೊಬಗು 
ಬಲು ಬೆರುಗು

ಅಸ್ವಸ್ಥರು, ಅನಾಥರು
ನಿರ್ಗತಿಕರು, ನಿರಾಶ್ರಿತರಿಗೆ
ಇದು ಬೆರಗಲ್ಲ, ಸೊಬಗಲ್ಲ
ಉಸಿರುಗಟ್ಟುವ ಬೇಗೆ
ಹೆಪ್ಪುಗಟ್ಟಿಸುವ ಶೀತ

ಅವರೆಲ್ಲರೂ
ಮುದುಡಿ ಮಲಗಿಹರು
ಮರುಕಲು ಮನೆಯೊಳಗೆ
ನಿಶ್ಚಲ ಶವದಂತೆ
ನಾಳಿನ ಹಗಲಿಗಾಗಿ ಕಾಯುತ
ಬೆಚ್ಚನೆಯ ಮನೆಯಲಿಲ್ಲ
ದಪ್ಪನೆಯ ರಗ್ಗು-ಗುಡಾರಗಳಿಲ್ಲ
ಹೆಪ್ಪುಗಟ್ಟಿಸುವ
ಈ ಚಳಿರಾತ್ರಿಯಲಿ
ಎಲ್ಲಿಯ ನಿದ್ದೆ ಅವರಿಗೆ

ಹೌದು, ಈ ಚಳಿಯ ಸೊಬಗು
ಉಳ್ಳವರಿಗಷ್ಟೆ ಬೆರುಗು..!

- ವಿಷ್ಣು ಹೆಗಡೆ, ಕುಮಟಾ

Sunday, July 10, 2016

ಮಳೆಹನಿ...!













ಹಸಿರು ಬಿತ್ತುವ 
ಆಸೆಗೆ ನೀರೂಣಿಸು
ಭುವಿಯೆದೆಯ 
ಬೇಗುದಿ ತಣಿಸು
ಬಂದುಬಿಡು ಬೇಗನೆ
ಮಳೆಹನಿಯೇ..! 

ಹುಣ್ಣಿಮೆ ಬೆಳದಿಂಗಳ ಹೀರಿ
ಮದವೇರಿದೆ ಮನ
ಮುತ್ತಿನ ಮಳೆಸುರಿಸುತ
ಬೇಗನೆ ಬಂದುಬಿಡು 
ಮಳೆಹನಿಯೇ..!

ಇಳೆಯ ಬೇಗುದಿ 
ಎದೆಯಾಳದೊಳಗಿಳಿದು
ಸುಡುವ ಹೃದಯವ
ತಂಪೆರೆದು ತಣಿಸು 
ಬಂದುಬಿಡು ಬೇಗನೆ 
ಮಳೆಹನಿಯೇ..!

- ವಿಷ್ಣು ಹೆಗಡೆ, ಕುಮಟಾ

Tuesday, June 28, 2016

ವಿರಹವೇದನೆ...











ಮುಗಿಲೆಂಬ ಕೆನ್ನೆಯ 
ಮೇಲಿಂದ ಜಾರುವ ಹನಿಯಂತೆ
ಅವಳ ಕಣ್ಣಿನಿಂದ 
ಜಿನುಗುತ್ತಿದೆ ನೀರಹನಿ
ಅವಳಿಗೂ-ಮುಗಿಲಿಗೂ
ವಿರಹವೇದನೆಯಂತೆ..!

-----------------------

ಇಬ್ಬನಿಯ ತಂಪಿಲ್ಲದೆ
ಕೆಂಪಗಾಗಿದೆ ಭೂಮಿ
ಕಂಪಿಸುತಿದೆ ಇಬ್ಬನಿಗಾಗಿ
ನಿನ್ನ ಕೆನ್ನೆಯಂತೆ..!

- ವಿಷ್ಣು ಹೆಗಡೆ, ಕುಮಟಾ

Sunday, June 26, 2016

ಡ್ರೀಮ್











ನನ್ನಾಕೆಯ 
ಮನವೀಗ ಹಸೀ ಬಾಣಂತಿ
ಮಗು ಜನಿಸುವ ಮುನ್ನವೇ
ನೆನಪುಗಳೆಲ್ಲಾ ಗರ್ಭಕಟ್ಟಿ
ಮನದಲ್ಲೆ ಶುರುವಾಗಿದೆ
ಅವಳ ಬೊಗಸೆಯಾಟ 
ಕನಸೆಂಬ ಭ್ರೂಣ ಬೆಳೆದು
ಮುಗುವಾಗಿ 
ಧರೆಗೆ ಬರುವ ಮುನ್ನವೇ

    ಪ್ರತಿದಿನ, ಪ್ರತಿಕ್ಷಣ
    ಆತಂಕ ಅವಳ ಮನದಿ
    ಕಣ್ತುಂಬ ಕಾಳಜಿ
    ಆರೈಕೆಯ ಕನವರಿಕೆ
    ಅನುದಿನ, ಅನುಕ್ಷಣ
    ಕನಸೆಂಬ ಭ್ರೂಣ ಬೆಳೆದು
    ಮುಗುವಾಗಿ 
    ಧರೆಗೆ ಬರುವ ಮುನ್ನವೇ


- ವಿಷ್ಣು ಹೆಗಡೆ, ಕುಮಟಾ

ಓ ತಂಗಾಳಿಯೇ












ಮರೆಯಬೇಡ
ಓ ತಂಗಾಳಿಯೇ 
ನನ್ನಾಸೆ ತಿಳಿಸು ಅವಳಿಗೆ
ಮೃದುವಾಗಿ ಮೈಸೋಕಿ
ಮೆತ್ತನೆ ಹೇಳು
ಯಾರಿಗೂ ಕೇಳದಂತೆ!

      ಹೆಪ್ಪುಗಟ್ಟಿ ಹೋದೆ
      ನೀನವಳ ಮೈಸವರಿ
      ಅರುಹಿದ ಸುದ್ದಿ ತಿಳಿದು
      ಕತ್ತಲಾಗಿದೆಯೆಂದು ಭ್ರಮಿಸಿ 
      ಕನಸು ಕಂಡೆ
      ನಡು ಮಧ್ಯಾಹ್ನ

ಓ ತಂಗಾಳಿಯೇ 
ನನ್ನಾಸೆ ತಿಳಿಸು ಅವಳಿಗೆ
ಕತ್ತಲಾಗುವ ಮುನ್ನ


- ವಿಷ್ಣು ಹೆಗಡೆ, ಕುಮಟಾ

Monday, June 13, 2016

ಕಾಗೆ













ಕಾ(ಗೆ)ಲೆಳೆದು
ನಿಂದಿಸುವರು
ಇಂದು..!

          ಕರೆದು ಪೂಜಿಸುವರು
          ಶ್ರದ್ಧೆಯಿಂದ 
          ಶ್ರಾದ್ಧದಂದು..! 
          ಎಲೆ ಮಾನವ

ವಿಕಾರ,ವಿಕ್ಷಿಪ್ತ,ವಿಕೃತಿಗೆ
ನಾನು ಉದಾಹರಣೆ
ನನ್ನ ಹೆಸರು
ಅಪಹಾಸ್ಯದ ವಸ್ತು
ಕಪ್ಪು-ಬಿಳುಪಿನ ವ್ಯತ್ಯಾಸಕ್ಕೆ 
ನನ್ನ ಮೈಬಣ್ಣವೇ ಹೋಲಿಕೆ
ಎಲೆ ಮಾನವ

       ಶನಿಯ ವಾಹನವೆಂಬುದು
       ಹೆಸರಿಗಷ್ಟೆ
       ನನಗಂಟಿಗೆ 
      'ಅಪಶಕುನ'ದ ಪಟ್ಟ
       ಕರ್ಕಶ ಧ್ವನಿಗೂ
       ನನ್ನದೆ ನೆನಪು

ಆದರೆ ನಾನೆಂದು 
ಬಣ್ಣ ಬದಲಿಸುವುದಿಲ್ಲ
ನಿನ್ನಹಾಗೆ..!
ಎಲೆ ಮಾವನ


- ವಿಷ್ಣು ಹೆಗಡೆ, ಕುಮಟಾ

Thursday, June 25, 2015

ನಲ್ಲೆ












ಮಳೆ ನೀರಲ್ಲಿ
ನೆನೆದು 
ಮನವು ನಡುಗುತಿಹುದು
ತಂಗಾಳಿ ಮೈಸೋಕಿ 
ಹೃದಯ ತಂಪಾಗಿಹುದು
ನಿನ್ನೊಲುಮೆಯ
ಹೊಂಬಿಸಿಲಿಗಾಗಿ ಕಾದಿಹುದು 
ನನ್ನೀ ಮನ 

ವಿಷ್ಣು ಹಗಡೆ, ಕುಮಟಾ

Sunday, June 21, 2015

ಮತ್ತೆ ಮಳೆ ಬಂದಿದೆ


















ಮತ್ತೆ ಮಳೆ ಬಂದಿದೆ
ಹನಿಯ ಸುರಿಸಲು
ರಂಗುರಂಗಿನ ತರಂಗವೆಬ್ಬಿಸಿ
ಮನ ತಣಿಸಲು

ಕಪ್ಪುಗಟ್ಟಿದ ಮೋಡ
ಭರಸಿಡಿಲು
ಕಣ್ಣುಕೊರೈಸುವ ಮಿಂಚು
ಭೋರ್ಗರೆದು ಅಬ್ಬರಿಸುತದೆ
ಮುದುಡಿದ ಮನಕೆ
ನವೋಲ್ಲಾಸ ತುಂಬಲು
ಮತ್ತೆ ಮಳೆ ಬಂದಿದೆ

ಹೆಬ್ಬಂಡೆ ಮೋಡ
ಕರಗಿ ನೀರಾಗಿ ಸುರಿಯಲು
ಭಾವ ಬೆರಗಾಗಿ ಕುಣಿಯಲು
ಮತ್ತೆ ಮಳೆ ಬಂದಿದೆ

ಹಳೆಯದೆಲ್ಲ ನೆನಪಾಗಿ
ಧಾರೆಧಾರೆಯಾಗಿ ಸುರಿಯುತಿದೆ
ಮನಸು ತೊಯ್ದು
ಕನಸು ಗರಿಗೆದರಿದೆ
ಹಸಿ ಹಸಿ ಒದ್ದೆ ಮನದಲ್ಲಿಗ
ಗರಿಗರಿ ನವಿರು ಕನಸು
ಮನಕೆ ಚೈತನ್ಯ ತುಂಬಲು
ಮತ್ತೆ ಮಳೆ ಬಂದಿದೆ

- ವಿಷ್ಣು ಹೆಗಡೆ, ಕುಮಟಾ

ವಿಸ್ಮಯ..!













ತುಂತುರು ಹನಿಗಳ ಸಿಂಚನಕ್ಕೆ
ನೆಲದೊಳಗಿನ ಬೀಜ
ಅರಳಿ ಮೊಳಕೆಯೊಡೆದಿದೆ
ಬರಡು ನೆಲ ಹಸಿರಾಗಿ
ಮುಗುಳು ನಗುತಿದೆ
ಬಾನಾಡಿಯಿಂದ ಉರುಳುವ
ಹನಿಯ ರಾಗಕೆ

-ವಿಷ್ಣು ಹೆಗಡೆ, ಕುಮಟಾ

Friday, August 1, 2014

ಅವಳ ಅಂತರಾಳ











ಕಣ್ಣಿಗೆ ಕಾಡುವ
ನನ್ನವಳ ಕಾಡಿಗೆ 
ಚೆಂದದ ಬಿಂದಿಗೆ
ಇಳಿಬಿಟ್ಟ ಕೂದಲ
ಆ ಹೆಣ್ಣಿಗೆ
ನಾ ಮರುಳಾದೆ
ಪ್ರೀತಿ ತುಂಬಿದ 
ಅವಳ ಅಂತರಾಳಕೆ 
ನಾ ಬೆರಗಾದೆ.!

ವಿಷ್ಣು ಹೆಗಡೆ, ಕುಮಟಾ

Monday, February 3, 2014

ಮೌನ'ವಾಣಿ'










ಕಣ್ಣಂಚಲಿ ಕನಸುಗಳು
ಹೇಳಲೊಲ್ಲಳು
ಮೌನವೀಣೆ ನುಡಿಸುವಳು
‘ಮೂಕ’ರಾಗದಲಿ
ಒಲವ ‘ಸ್ವರ’ದಲಿ
ಲಯಬದ್ಧವಾಗಿ
‘ಮನ’ತಟ್ಟುವಳು
ಲೋಪವಾಗದಂತೆ !

ವಿಷ್ಣು ಹೆಗಡೆ, ಕುಮಟಾ

Thursday, January 30, 2014

ಚಂದಿರೆ ತಂದ ಬೆಳದಿಂಗಳು











ಪೂರ್ಣ ಚಂದಿರ
ಮರೆಯಾಗಿಹನು
ಮೋಡದಿ
ನನ್ನ 'ಚಂದಿರೆ'ಯ ನೋಡಿ

ಕಿಟಕಿಯಲಿಣುಕಿ
ನೋಡುವನು
ಅವಳ ಚಲುವ-ಚಿತ್ತಾರವ

ನಡು ಅಮವಾಸ್ಯೆಯೂ
ಬೆಳದಿಂಗಳು ಮನೆಯೊಳು
ನನ್ನ 'ಚಂದಿರೆ'ಯ
ಕಾಂತಿ ಕಂಗಳಿಂದ
ಚೆಲುವ ನಗುವಿನಿಂದ

ವಿಷ್ಣು ಹೆಗಡೆ, ಕುಮಟಾ

'ಹನಿ'ಕವನ












ಅಮಲು!
ಅಮಲೇರಿತ್ತು
ಸಿಗರೇಟು ಸೇದುವವನ
ಪಕ್ಕದಲ್ಲಿ ನಿಂತು..!
 

ಡ್ಯೂಟಿ
ಫುಲ್ ಡ್ಯೂಟಿ
ನೈಟ್ಗೊಂದು ನೈಂಟಿ
ರಿಲಾಕ್ಸ್ ಗ್ಯಾರಂಟಿ..!
 

ಮದನಾರಿ
ಯುವಕರಿಗೆ
ಕುಡಿಯದೇ ಕಿಕ್
ಕೊಡುವ
'ಸಾರಿ'ಯುಟ್ಟ 'ನಾರಿ'


ವಿಷ್ಣು ಹೆಗಡೆ, ಕುಮಟಾ

Monday, November 4, 2013

Saturday, November 2, 2013

ಓ ಕನಸೇ!












ಎಲ್ಲಿ ಹೋದೆ
ನನ್ನಿಂದ ದೂರವಾಗಿ
ಸವಿ ನಿದ್ದೆಯಿಂದ
ಮರೆಯಾಗಿ

ನೀನಿರದ ಬದುಕು
ನನೆಗೊಂದು ಶಾಪ
ಬೆಂದಿಹುದು ಮನಸು
ಹೊರಬರದೆ ತಾಪ
ಬಿಡು ಸಾಕು
ಈ ಕೋಪ

ಸವಿ ನಿದ್ರೆಯ
ಗೆಳೆಯ ನೀನು
ಸುಂದರ ಸ್ವಪ್ನಗಳ
ಯಜಮಾನ ನೀನು

ಕತ್ತಲಾಗಿದೆ ಜಗತ್ತು
ಬೆತ್ತಲಾಗಿದೆ ಮನಸು
ಕಹಿಯಾಗಿವೆ ರಾತ್ರಿಗಳು
ನಿನ್ನೊಲವ
ಕೊರತೆಯಿಂದ

ಭಾವನೆ ನೂರಾರು
ಬಣ್ಣದ ಬದುಕಿಗೆ
ಕಲ್ಪನೆ ಸಾವಿರಾರು
ಹುಚ್ಚು ಮನಸಿಗೆ 
ಆದರೆ, ನೀನಿಲ್ಲದೆ
ಇವೆಲ್ಲ ಅಪೂರ್ಣ
ಕಾಯಿಸದಿರು
ಬೇಗ ಬಂದು ಬಿಡು!

ವಿಷ್ಣು ಹೆಗಡೆ, ಕುಮಟಾ

Friday, November 1, 2013

ಜೀವ-ಭಾವ










ನಿನ್ನುಸಿರ ಸೌಗಂಧ
ಹೃದಯಂಗಳ ತುಂಬ
ಕಣ್ಣಲ್ಲಿ ನಿನ್ನದೇ ಬಿಂಬ

ನಿನ್ನ ನಗುವಿನ
ಹೂಮಳೆಗೆ ಚಿಗುರಿವೆ
ಭಾವಗಳು
ಮೌನದ ಮೊಗ್ಗೊಡೆದು
ಅರಳಿವೆ ಕನಸುಗಳು

ನೋವಿನ ನೆನಪುಗಳು
ಅಳಿದುಹುದು
ನಿನ್ನೊಲುಮೆಗೆ
ಜೀವ ಸಿಕ್ಕಿದೆ ಭಾವಕ್ಕೆ
ಬತ್ತಿ ಹೋಗಿದ್ದ ಜೀವಕ್ಕೆ

ವಿಷ್ಣು ಹೆಗಡೆ, ಕುಮಟಾ

Tuesday, September 10, 2013

ಕಾಮನಬಿಲ್ಲು


 








ತಿಳಿ ಮುಗಿಲ
ತಂಗಾಳಿಯಲಿ
ಕಾಮನಬಿಲ್ಲೊಂದು
ಮೈ ಸವರಿತು 

ತರ ತರದ ಅನುಭವ
ಮನದ ತುಂಬ
ನಾ ಮೈರೆತೆ
ಪ್ರಕೃತಿಯ ತುಂಟತನಕ್ಕೆ
ಭೂವಿಯ ಚೆಲುವಿಗೆ

ವಿಷ್ಣು ಹೆಗಡೆ, ಕುಮಟಾ

 

Monday, August 26, 2013

ನನ್ನ ಕಥೆ ಕೇಳಿ!















ಹಲೋ, ನಾನು ರೂಪಾಯಿ
ನನ್ನ ಕಥೆ ಕೇಳಿ
ಹುಟ್ಟಿದಾಗಿನಿಂದ
ಮೌಲ್ಯ ಕಳೆದುಕೊಳ್ಳುತ್ತಲೇ ಇದ್ದೇನೆ
ಅಪಮೌಲ್ಯ ಹೊಸತಲ್ಲ ನನಗೆ
ಆದರೆ, ದಿಢೀರ್
ಕುಸಿದಿರುವುದು
ಇದೇ ಮೊದಲು ನಾನು

ಒಂದೆಡೆ 'ದೊಡ್ಡಣ್ಣ'ನ ಆಘಾತ
ಇನ್ನೊಂದೆಡೆ ದೇಶೀಯ ಕುಸಿತ
ಹೊರ ಹರಿವು ಹೆಚ್ಚಿದೆ
ಒಳ ಹರಿವು ಕಡಿಮೆಯಾಗಿದೆ
ಬಡವಾಗಿರುವೆ, ಸೊರಗಿರುವೆ

ನನ್ನ ಕುಸಿತ ತಡೆಯಲು
ಆರ್ಬಿಐನ ಕ್ರಮ
ಫಲ ಕೊಡಲಿಲ್ಲ
ವಿತ್ತ'ತಜ್ಞ'ರ ಜ್ಞಾನ
ಉಪಯೋಗಕ್ಕೆ ಬರಲಿಲ್ಲ
ಪರಿಣಾಮ ಪತಾಳಕ್ಕಿಳಿದೆ

ನೀವಾದರೂ ನನ್ನ ಕುಸಿತ
ತಡೆಯಲು ಪ್ರಯತ್ನಿಸಿ
ಪೆಟ್ರೋಲ್ ಕಡಿಮೆ ಉಪಯೋಗಿಸಿ
ದೇಶೀಯ ಉತ್ಪನ್ನ ಬಳಸಿ
ಚಿನ್ನದ ಮೋಹ ಕಡಿಮೆ ಮಾಡಿ
ಆಮದು ಅವಲಂಬಿತ
ಐಷಾರಾಮಿ ವಸ್ತುಗಳ
ಖರೀದಿಗೆ ಮಿತಿ ಹಾಕಿ
ನನ್ನ ಜೀವ ಉಳಿಸಿ

ನಾನು ಮತ್ತಷ್ಟು ಕುಸಿದರೆ
ಬದುಕು ಭಾರವಾಗಲಿದೆ
ದರ ಏರಿಕೆಯ ಬಿಸಿ ತಟ್ಟಲಿದೆ


ವಿಷ್ಣು ಹೆಗಡೆ, ಕುಮಟಾ

ಅಸೂಯೆ













ಭೂತಾಯಿ ಮೆರವಣಿಗೆ
ಹೊರಟಿದ್ದಾಳೆ
ನವವಧುವಿನಂತೆ
ಸಿಂಗರಿಸಿಕೊಂಡು


ಚೆಲುವಿಗೆ ಮನಸೋತ
ತಾರೆಗಳು
ಮೋಡದಲ್ಲಿ ಅಡಗಿ
ಕುಳಿತಿವೆ
ಅಸೂಯೆಯಿಂದ!


ವಿಷ್ಣು ಹೆಗಡೆ, ಕುಮಟಾ

ಪ್ರವಾಹ














ಮಳೆಯೋ ಮಳೆ
ಭುವಿ-ಬಾನು ಒಂದಾಗುವಂತೆ
ಭೂಮಿ ನಡುಗಿತು
ಬಾಯ್ತೆರೆಯಿತು
ಮನೆಯೇನು, ಪ್ರಾಣವೂ ಹಾರಿತು
ಪ್ರಳಯಾರ್ಭಟಕ್ಕೆ
ವರುಣನ ಮುನಿಸಿಗೆ

ಎಲ್ಲ ಅಯೋಮಯ
ಸಾವಿಗೆ ಶರಣಾಯಿತು
ರಾಶಿ ರಾಶಿ ಜೀವ
ಎಲ್ಲಿ ನೋಡಿದರೆಲ್ಲಿ
ಗುರುತು ಸಿಗದ ಶವಗಳು
ಪಾಳು ಬಿದ್ದ ಆಸ್ತಿ
ಕುಸಿದ ಕಟ್ಟಡಗಳು
 

ನೊಂದವರ ಆಕ್ರಂದನ
ಮುಗಿಲು ಮುಟ್ಟಿತ್ತು
ಪ್ರಕೃತಿ ಮುನಿದಂತಿತ್ತು
ಮಾನವನ ದುರಾಸೆಗೆ


ವಿಷ್ಣು ಹೆಗಡೆ, ಕುಮಟಾ

Sunday, August 25, 2013

ನೀ ನಕ್ಕಾಗ!



 







ನೀ ಒಮ್ಮೆ ನಕ್ಕಾಗ
ನಕ್ಕು ನೀ ನಲಿದಾಗ
ಕವಿತೆಯೊಂದು ಹುಟ್ಟಿತು

ಇದು, ನಿನ್ನಿಂದಲೇ
ನಿನ್ನ ತುಟಿಯಂಚಿನ 

ನಗೆಯಿಂದಲೇ!

ಆದರೆ, ಬರೆಯಲು
ಪದಗಳೇ ಇಲ್ಲ
ಹೇಗೆ ಪೂರ್ತಿ ಗೊಳಿಸಲಿ
ಹೇಳು...?
ನಿನ್ನ ಕವಿತೆಗೆ
ನೀನೇ ಮೊದಲ ಸಾಲು
ಬರೆದು ಹೋಗು!

ವಿಷ್ಣು ಹೆಗಡೆ, ಕುಮಟಾ
 

Saturday, August 24, 2013

ಹೊಂಗನಸು









ಈ ಸಂಜೆಯ
ಹೊಂಬಿಸಿಲಲಿ

ಹೊಸ ಕನಸಿನ
ಜನನ

ತಣಿದ ತನುಮನ
ನವೋಲ್ಲಾಸದ ದಿನ

ವಿಷ್ಣು ಹೆಗಡೆ, ಕುಮಟಾ
 

ನಿನ್ನದೇ ನಾದ









ನಿನ್ನೊಲುಮೆ
ಅಲೆ ಅಲೆಯಾಗಿ
ಅಪ್ಪಳಿಸಿ
ನನ್ನೊಡಲ ಕಡಲ
ಕದಡಿದೆ


ನಿನ್ನ ನೆನಪುಗಳು
ನನ್ನೊಳಗೆ ತುಂಬಿ
ಭಾವನೆಗಳಿಗೆ ಜೀವಬಂದು
ಹೃದಯವೀಣೆ
ಮಿಡಿಯುತಿದೆ
ನಿನ್ನ ನಾದವ


ವಿಷ್ಣು ಹೆಗಡೆ, ಕುಮಟಾ

Wednesday, June 19, 2013

ನನ್ನವಳು...


ನಲಿವಳು
ಮುಗುಳ್ನಗುವಳು
ನನ್ನ ಕಂಡೊಡನೆ
ನನ್ನವಳು

ಹೊಳೆವ ಕಂಗಳ
ತುದಿಯಂಚಲಿ
ಬೀರುವಳು ಓರೆನೋಟ!
ಯಾರಿಗೂ ಕಾಣದಂತೆ
ಕದ್ದುಮುಚ್ಚಿ ನೋಡುವಳು
ಮುಗ್ದ ಮನಸಿನ
ಮುದ್ದಾದ ಚೆಲುವಿನವಳು

ವಿಷ್ಣು ಹೆಗಡೆ, ಕುಮಟಾ

Thursday, June 13, 2013

ನಗುಮೊಗದವಳು!












ಮುಂಗುರಳ ಸರಿಸಿ
ನಾಚಿ ನಸು ನಕ್ಕಳು
ಅವಳು
ನಗಮೊಗದವಳು

ತಂಗಾಳಿ ಬಂದಾಗ
ಒಮ್ಮೆ ಕಣ್ಮುಚ್ಚಿ
ಕೆನ್ನೆಯ ಸವರಿ
ಬೆವರ ಒರೆಸಿಕೊಂಡಳು

ಮುಖದಲ್ಲಿ ಚಂದ್ರಕಾಂತಿ
ಶ್ವೇತವರ್ಣ, ಕೆಂದುಟಿ
ಮೃದು ಮಾತು
ಮಿತ ಭಾಷಿ  ಅವಳು 

ಕಲ್ಪನೆಯ ಸುಂದರಿ ನೋಡಿದ 
'ಆ ಕ್ಷಣ' ಕಂಡು
ಬಹುದಿನದ ಕನಸು 
ಸಾಕಾರಗೊಂಡು
ಮನತುಂಬಿ ಬಂತು

ಸವಿ ಸ್ವಪ್ನಗಳು 
ದಡ ಸೇರಿತ್ತು
ಅವಳ ನೋಡುತ್ತ 
ಕಾಲ ಓಡುತ್ತಿತ್ತು
ಮಾತನಾಡುತ್ತ..

ಅವಳು, ನನ್ನವಳು
ನಗುಮೊಗದವಳು!

ವಿಷ್ಣು ಹೆಗಡೆ, ಕುಮಟಾ

Sunday, May 26, 2013

ಆ ಬಿಳಿಗಡ್ಡದ ತಾತ ಯಾರು?



ಸಂಜೆಯ ಸಮಯ. ಒಂದು ವಾಕ್ ಗೆ ಹೊರಟಿದ್ದೆ. ಆಗಷ್ಟೆ ಮಳೆ ನಿಂತು, ನೀಲಾಕಾಶ ಕೆಂಪಾಗಿತ್ತು. ತುಂತುರು ಹನಿ ಮೈಯನ್ನ ತಬ್ಬುತ್ತಿತ್ತು. ಮಣ್ಣಿನ ವಾಸನೆ ಹೊತ್ತ ತಂಗಾಳಿ ಮನಕೆ ತಂಪೆರೆದು ಉಲ್ಲಾಸಗೊಳಿಸಿತ್ತು. ನಾನು ಹೊರಟ ಉದ್ದೇಶವನ್ನೇ ಮರೆತು ನನಗರಿವಿಲ್ಲದಂತೆ ಅಲ್ಲೆ ಹತ್ತಿರದಲ್ಲಿರುವ ರಾಮಕೃಷ್ಣಾಶ್ರಮ ಪ್ರವೇಶಿಸಿ, ಧ್ಯಾನ ಮಂದಿರ ಹೊರಗಡೆ ಕೂತಿದಿದ್ದೆ. ಇನ್ನೇನು ಕಣ್ಮುಚ್ಚಿ ಒಂದೆರೆಡು ನಿಮಿಷ ಧ್ಯಾನ ಮಾಡಿ ಹೊರಡಬೇಕು ಅನ್ನುವಷ್ಟರಲ್ಲಿ ಪಕ್ಕದಲ್ಲಿದ್ದ ಇಳಿವಯಸ್ಸಿನ, ಬಿಳಿಗಡ್ಡದ, ರಾಮಜಪ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಿನ್ನ ಜೀವನದ ಉದ್ದೇಶವೇನು ಅಂತಾ ಕೇಳಿದ.! ಆ ಘಳಿಗೆಯಲ್ಲಿ ಬಂದೆರಗಿದ ಅಪರಿಚಿತ ಭಾವ ಯಾಕೋ ನನ್ನನ್ನ ವಿಚಿಲಿತಗೊಳಿಸಿತು. ಅಷ್ಟಕ್ಕೆ ಸುಮ್ಮನಾಗಲಿಲ್ಲ ಪುಣ್ಯಾತ್ಮ. ಮಗು ನಿಧಾನವಾಗಿ ಯೋಚಿಸಿ ಅಂತಾ ಹೇಳಿ ನಾಪತ್ತೆಯಾದ. ಅಲ್ಲೆ ಪಕ್ಕದಲ್ಲೆ ಏಕಾಂಗಿಯಾಗಿ ಕೂತು ಯೋಚಿಸುತ್ತಾ ಹೋದೆ. ಉತ್ತರ ಹುಡುಕುವುದು ಕಷ್ಟವಾಯಿತು.!

ಇದಲ್ಲ ಅದು, ಅದಲ್ಲ ಇದು ಅಂತಾ ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೊ ದೂರ ತಳ್ಳಿದ್ದನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆ. ಹೆಸರು ಮಾಡಬೇಕು, ಶ್ರೀಮಂತನಾಗಬೇಕು, ಹೊಸ ಮನೆಕಟ್ಟಿ, ಹೊಸ ಕಾರಿನಲ್ಲಿ ಸುತ್ತಾಡಬೇಕು. ಜಗತ್ತಿನಲ್ಲಿರುವ ಎಲ್ಲಾ ವೈಭೋಗವನ್ನ ಅನುಭವಿಸಬೇಕು. ನೆಮ್ಮದಿ-ಸುಖಬೇಕು. ಮಕ್ಕಳು-ಮೊಮ್ಮಕ್ಕಳ ಜೊತೆ ಬದುಕಬೇಕು. ಇಷ್ಟೆಲ್ಲ ಸಿಕ್ಕರೂ ಸಂತೋಷವಿಲ್ಲ. ಮತ್ತೆನಕ್ಕಾಗೋ ಹುಡುಕಾಟ. ಇದನ್ನೆಲ್ಲ ಸಂಪಾದಿಸುವುದೇ ಜೀವನದ ಉದ್ದೇಶನಾ? ಅಥವಾ ಇದಕ್ಕಾಗೆ ಬದುಕಬೇಕಾ? ಇದನ್ನೆಲ್ಲ ಯೋಚಿಸುತ್ತಾ ಹೋದಂತೆ ಉತ್ತರ ಮತ್ತಷ್ಟು ಕಗ್ಗಂಟಾಗುತ್ತಾ ಹೋಯಿತು. ಸ್ನೇಹಿತನೊಬ್ಬ ಹೇಳಿದ ಲೈಫ್ ಈಸ್ ಫೆಸ್ಟಿವಲ್ ಎನ್ನುವ ಮಾತು ನೆನಪಾಯಿತು. ಎಂಥಾ ಅದ್ಭುತ ಕಲ್ಪನೆ ಎಂದು ಸಂತೋಷಪಡುವಷ್ಟರಲ್ಲಿಯೇ ಸನ್ಯಾಸಿಯೊಬ್ಬರು ಹೇಳಿದ ಲೈಫ್ ಈಸ್ ನಥಿಂಗ್, ಒನ್ ಡೇ ವಿ ವಿಲ್ ಡೈ ಅನ್ನುವ ಮಾತು ಮನಸ್ಸನ್ನ ಹೊಕ್ಕಿತು. ದ್ವಂದ್ವ ಕಾಡಿತು. ಗಂಭೀರವಾಗಿ ಕೂತು ನನ್ನನ್ನ ಅರಿಯಲು ಯತ್ನಿಸಿದೆ. ನಾನು ನಾನಾಗಿ ಯೋಚಿಸಿದೆ. ಅಹಂ ಬ್ರಹ್ಮಾಸ್ಮಿ ಅನ್ನುವುದರ ಅರ್ಥ ಅಸ್ಪಷ್ಟವಾಗುತ್ತಾ ಹೋಯಿತು. ಪ್ರಕೃತಿ ಮತ್ತಷ್ಟು ಸುಂದರವೆನಿಸಿತು. ಮಳೆ ಇನ್ನಷ್ಟು ಆಪ್ತವೆನಿಸಿತು. ಏಳೆಂಟು ನಿಮಿಷ ಮನಸಿನೊಂದಿಗೆ ನಡೆದ ಮಾತುಕತೆಯಲ್ಲಿ ಬದುಕಿನ ಉದ್ದೇಶಕ್ಕೆ ಸ್ಪಷ್ಟ ಉತ್ತರ ಸಿಗಲಿಲ್ಲ. ಬಂದ ಯೋಚನೆಗಳನ್ನೆಲ್ಲ ತಳ್ಳಿ ಹಾಕಲು ನೋಡಿ, ಮನಸ್ಸನ್ನ ಏಕಾಗ್ರಗೊಳಿಸಲು ಪ್ರಯತ್ನಿಸಿದೆ. ಮನಸ್ಸು ಸ್ತಬ್ಧಗೊಂಡಿತು.

ಕೆಲ ಹೊತ್ತಿನ ನಂತರ ಕಣ್ತೆರೆದೆ. ಸಯಮ ಓಡಿದಂತೆ ಭಾಸವಾಯಿತು. ಮಠದಲ್ಲಿ ಜನಜಂಗುಳಿ ಮಾಯವಾಗಿತ್ತು. ಹೊರಡೋಣ ಎಂದು ಮತ್ತೆ ಧ್ಯಾನ ಮಂದಿರದತ್ತ ಬಂದಾಗ ಬಿಳಿಗಡ್ಡ ವ್ಯಕ್ತಿಯನ್ನ ನೋಡಿದೆ. ಹಿಂಬಾಲಿಸಿದೆ.! "ನಿನ್ನ ಜೀವನದ ಉದ್ದೇಶವೇನು, ಯೋಚಿಸು ಮಗು" ಅಂತಾ ಹೇಳಿ ನಾಪತ್ತೆಯಾಗುತ್ತಿರುವ ದೃಶ್ಯ ಕಂಡುಬಂತು. ನನಗೆ ಇನ್ನಷ್ಟು ಕೂತುಹಲ ಹೆಚ್ಚಿತು. ಈ ತಾತನನ್ನ ಮಾತಾಡಿಸಲೇಬೇಕು ಅಂತಾ ಅವರತ್ತ ಹೋದೆ. ನೋಡಿದ ತಕ್ಷಣವೇ ನನಗೆ ಮತ್ತದೇ ಪ್ರಶ್ನೆ ಕೇಳಿದರು. ಅವರನ್ನ ಮಾತಿಗೆಳೆಯುವ ಪ್ರಯತ್ನ ಮಾಡಿದೆ. ಮಾತನಾಡಲಿಲ್ಲ, ಅಲ್ಲಿಂದ ಕಾಲ್ಕಿತ್ತರು.ಏನೇ ಇರಲಿ, ನನ್ನೊಳಗೆ ಬದುಕಿನ ಉದ್ದೇಶದ ಪ್ರಶ್ನೆ ಬಿತ್ತಿ ಕೆಲ ಸಮಯ ಯೋಚಿಸುವಂತೆ ಮಾಡಿದ ತಾತನಿಗೆ ಮನಸಿನಲ್ಲೆ ಥ್ಯಾಂಕ್ಸ್ ಹೇಳಿದೆ. ಮನೆಗೆ ಬಂದರೂ ಆ ಬಳಿಗಡ್ಡದ ನಿಗೂಢ ವ್ಯಕ್ತಿಯ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಲೇ ಇತ್ತು.

- ವಿಷ್ಣು ಹೆಗಡೆ, ಕುಮಟಾ

Sunday, April 28, 2013

ಕನಸಿನಲ್ಲಿ ಬಂದವಳು..














ಮುಂಜಾನೆಯ ಕನಸಿನಲಿ 
ಮಬ್ಬಾದ ಬೆಳಕಿನಲಿ
ಮರೆಯಾದ ಮಾಯಾವಿ ನೀನು 
ನನ್ನ ಕನಸು ನೀನು

ಮೌನದೊಳು ಮಾತಾಗಿ
ಕನಸಿಗೆ ಸ್ಪೂರ್ತಿಯಾಗಿ 
ಭಾವದೊಳು ಬಂಧಿಯಾದ ಭಾವ ನೀನು
ನನ್ನ ಕನಸು ನೀನು 

ಮುಸ್ಸಂಜೆಯ
ತಂಗಾಳಿಯಾಗಿ 
ಜೀವದಾ ಗೆಳತಿಯಾಗಿ
ಮನಕೆ ತಂಪೆರೆವ ಸಿಹಿಗಾಳಿ ನೀನು 
ನನ್ನ ಕನಸು ನೀನು

ವಿಷ್ಣು ಹೆಗಡೆ, ಕುಮಟಾ

ಮೌನಿಯಾದೆ!


 
















ಅನುದಿನ, ಅನುಕ್ಷಣ
ನೆನೆದೆ ನಿನ್ನನೆ
ನೆನಪನು ನೆನೆಯುತ
ಮೌನಿಯಾದೆ ಸುಮ್ಮನೆ

ಕಣ್ಮುಚ್ಚಿ ತೆರೆದರೂ
ನಿನ್ನದೆ ಧ್ಯಾನ
ಕಾದಿರುವೆ ನಿನಗಾಗಿ
ಮೋಡದಿ ಮಳೆಯಾಗಿ
ಇಳೆಯಲಿ ಹರಿದು
ಬಂದು ಸೇರುವೆಯಾ?
ನೀ ಬರುವೆ
ಎಂಬ ಕನಸಿನಲಿ
ನಾ ಇರುವೆ!

ವಿಷ್ಣು ಹೆಗಡೆ, ಕುಮಟಾ