
ಹೋಮ್ ವರ್ಕ್ ಮಾಡದಿರುವ ಆಟಗಾರರು ತಂಡದಿಂದಲೇ ಔಟ್.!!
ಆಸ್ಟ್ರೇಲಿಯಾ ಮ್ಯಾನೇಜ್ ಮೆಂಟ್ ನ ಇಂತದೊಂದು ನಿರ್ಧಾರ ಮೇಲ್ನೋಟಕ್ಕೆ ತಮಾಷೆಯಾಗಿ ಕಾಣಬಹುದು. ಆದರೆ ಶಿಸ್ತನ್ನೆ ಪ್ರಮುಖ ಮಾನದಂಡವಾಗಿಟ್ಟುಕೊಂಡ ಆಸಿಸ್ ಗೆ ಇಂತ ನಿರ್ಧಾರ ಹೊಸದಲ್ಲ. ಅಲ್ಲಿ ತಂಡ ಮುಖ್ಯವೇ ಹೊರತು ವ್ಯಕ್ತಿ ಅಲ್ಲ. ಶಿಸ್ತು ಮೊದಲು. ಆ ಆಟಗಾರ ಎಂಥವನೇ ಇರಲಿ. ಆತನ ರೆಕಾರ್ಡ್ ನ್ನ ನೋಡುವುದು, ಅಳೆಯುವುದು ಆನಂತರವೆ. ಈ ಪಾಲಿಸಿಗಳೇ ಆಸ್ಟ್ರೇಲಿಯಾ ಕ್ರಿಕೆಟ್ ನ ಜೀವಾಳ. ಸ್ವೀವ್ ವಾ, ರಿಕಿ ಪಾಂಟಿಂಗ್ ನಂತಹ ಶ್ರೇಷ್ಠ ಆಟಗಾರರು ಫಾರ್ಮ್ ಕಳೆದುಕೊಂಡಾಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದ್ದೇನು ಗೊತ್ತೆ? "ಯುವಕರಿಗೆ ದಾರಿ ಬಡಿ, ನಿಮ್ಮ ಸೇವೆ ಸಾಕು, ವಿಶ್ರಾಂತಿ ತೆಗೆದುಕೊಳ್ಳಲು ನಿಮಗಿದು ಸರಿಯಾದ ಸಮಯ" ಅಂತಾ ಯಾವುದೇ ಮುಲಾಜಿಲ್ಲದೆ ಖಡಕ್ ಸಂದೇಶ ರವಾನಿಸಿತ್ತು. ಇದೇ ಕಾರಣದಿಂದಲೇ ಪಂಟರ್ ದಿಢೀರ್ ಆಗಿ ವಿದಾಯ ಘೋಷಿಸಿದ್ದರು. ತಂಡ ಮುಖ್ಯ, ವ್ಯಕ್ತಿ ಮುಖ್ಯವಲ್ಲ ಎಂಬುದೇ ಅವರ ಶಕ್ತಿ.
ಮೊನ್ನೆ ಹೈದರಾಬಾದ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ಸೋತ ಬಳಿಕ ಆಸ್ಟ್ರೇಲಿಯನ್ನರು ಐದನೇ ದಿನವೂ ಅದೇ ಪಿಚ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದರು. ಅವರು ಹುಟ್ಟಾ ಹೋರಾಟಗಾರರು. ಸೋಲನ್ನ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ, ಕಳೆದ ಬಾರಿ ಆಸಿಸ್ ಪ್ರವಾಸಕ್ಕೆ ಹೋಗಿದ್ದಾಗ ಧೋನಿ ಪಡೆ ಎಲ್ಲಾ ಟೆಸ್ಟ್ ನಲ್ಲೂ ಮೂರೇ ದಿನಗಳಲ್ಲಿ ಸೋಲಿಗೆ ಶರಣಾಗಿತ್ತು. ಒಮ್ಮೆಯೂ ಇಂತ ಪ್ರಯತ್ನಕ್ಕೆ ಮುಂದಾಗಲಿಲ್ಲ. ಸೋತ ಮರುದಿವೇ ಶಾಪಿಂಗ್ ಮಾಲ್ ಗಳಲ್ಲಿ ಸುತ್ತಾಟ, ಪತ್ನಿ ಜೊತೆ ಜಾಲಿರೈಡ್ ಮಾಡಿದ್ದರು ನಮ್ಮ ಆಟಗಾರರು.! ನಮಗೂ, ಆಸ್ಟ್ರೇಲಿಯನ್ನರಿಗೂ ವೆತ್ಯಾಸ ಇಷ್ಟೆ!

ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ ಭಾರತದ ತಂಡದ ಕೋಚ್ ಆಗಿದ್ದಾಗ, ಶಿಸ್ತನ್ನ ಕಲಿಸುವ ಪ್ರಯತ್ನ ಮಾಡಿದ್ದರು." ಸೆಹ್ವಾಗ್ ಉತ್ತಮ ಆಟಗಾರ. ಆದರೆ, ಆತ ಅಭ್ಯಾಸದಲ್ಲಿ ಮೈ ಬಗ್ಗಿಸುವುದಿಲ್ಲ" ಹೀಗಂತ ಬಹಿರಂಗವಾಗಿಯೇ ಹೇಳಿದ್ದರು. ಯುವರಾಜ್ ಸಿಂಗ್, ಸೌರವ್ ಗಂಗೂಲಿಯ ಅಶಿಸ್ತಿನ ಬಗ್ಗೆಯೂ ಬಿಸಿಸಿಐಗೆ ಪತ್ರ ಬರೆದು ಅಸಮಾಧಾನ ತೊಡಿಕೊಂಡಿದ್ದರು. ಆಟಗಾರರಿಗೆ ಬುದ್ಧಿ ಹೇಳುವ ಬದಲು ಬಿಸಿಸಿಐ ಚಾಪೆಲ್ ಗೆ ಬುದ್ಧಿ ಹೇಳಿತ್ತು. ಪರಿಣಾಮ ಆಟಗಾರರಿಗೆ ಶಿಸ್ತನ್ನ ಕಲಿಸಲು ಹೋದ ಚಾಪೆಲ್, ಎಲ್ಲರಿಗೂ ನಿಷ್ಠುರರಾಗಿ, ಕೊನೆಗೆ ಕೋಚ್ ಪದವಿಯನ್ನೇ ಕಳೆದುಕೊಂಡಿದ್ದರು. ಆದರೆ, ಈಗಿನ ಆಸ್ಟ್ರೇಲಿಯಾ ಕೋಚ್ ಮಿಕಿ ಅರ್ಥರ್, ಅಶಿಸ್ತಿನಿಂದ ನಡೆದುಕೊಂಡ ನಾಲ್ವರು ಆಟಗಾರರನ್ನ ಪಂದ್ಯದಿಂದ ಕೈಬಿಡುವ ನಿರ್ಧಾರಕ್ಕೆ, ಅಲ್ಲಿನ ಮಂಡಳಿಯೇ ಸಂಪೂರ್ಣ ಬೆಂಬಲ ಸೂಚಿಸಿ, ಸಹಕಾರ ನೀಡಿದೆ. ನಮ್ಮ ಬಿಸಿಸಿಐಗೂ, ಆಸ್ಟ್ರೇಲಿಯಾ ಮಂಡಳಿಗೂ ಇರುವ ಅಜಗಜಾಂತರ ವೆತ್ಯಾಸವಿದು.!!

ಸರಿಯಾಗಿ ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣ ಕೊಟ್ಟು, ಉಪನಾಯಕ ಶೇನ್ ವ್ಯಾಟ್ಸನ್, ಹಿರಿಯ ಅನುಭವಿ ಬೌಲರ್ ಮಿಚೆಲ್ ಜಾನ್ಸನ್ ಸೇರಿ ನಾಲ್ವರನ್ನ ಆಸ್ಟ್ರೇಲಿಯಾ ಮುಂದಿನ ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಕೈಬಿಟ್ಟಿದ್ದು, ಅಲ್ಲಿನ ಮಂಡಳಿಯ ದಿಟ್ಟ ನಿರ್ಧಾರ. ಆದರೆ, ನಮ್ಮಲ್ಲಿ ಇಂತದೊಂದು ನಿರ್ಧಾರವನ್ನ ತೆಗೆದುಕೊಳ್ಳಲು ಬಿಸಿಸಿಐಗೆ ಸಾಧ್ಯವೇ? ಹೋಮ್ ವರ್ಕ್ ಮಾತಿರಲಿ, ಕೆಲ ಹಿರಿಯ ಆಟಗಾರರು ಅಭ್ಯಾಸಕ್ಕೆ ಸರಿಯಾಗಿ ಬರುವುದಿಲ್ಲ. ಕೋಚ್ ಮಾತು ಬಹುತೇಕರಿಗೆ ಅಲಕ್ಷವೇ. ಕಳೆದ ನಾಲ್ಕೈದು ವರ್ಷಗಳಿಂದ ತಂಡದಲ್ಲಿ ಒಳಜಗಳ ಒಳಗೊಳಗೆ ಹೊಗೆಯಾಡುತ್ತಲೇ ಇದೆ. ಧೋನಿಯದ್ದೆ ಒಂದು ಬಣ, ಸೆಹ್ವಾಗ್ ದೇ ಒಂದು ಬಣವಾಗಿದೆ. ಇದೆಲ್ಲ ಕಳೆದ ಆಸಿಸ್ ಪ್ರವಾಸದಲ್ಲೇ ಬಯಲಾಗಿತ್ತು. ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು ಆಟಗಾರರು. ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಶಿಸ್ತು ಕ್ರಮದ ಮಾತು ಬೇಡ, ಬಿಸಿಸಿಐ ಸೌಜನ್ಯಕ್ಕೂ ಒಂದೇ ಒಂದು ಎಚ್ಚರಿಕೆಯನ್ನ ಕೊಟ್ಟಿರಲಿಲ್ಲ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಇಂತ ಅಸಹಾಯಕತೆಯಿಂದಾಗೇ ತಾವು ಏನು ಮಾಡಿದರೂ ನಡೆಯುತ್ತದೇ ಎಂಬ ಮನೋಭಾವ ಆಟಗಾರರಲ್ಲಿ ಮನೆಮಾಡಿದೆ. ಈ ಮನಸ್ಥಿತಿ ಬದಲಾಗಬೇಕು. ಇದನ್ನ ಬದಲಾಯಿಸಲು ಬಿಸಿಸಿಐಗೆ ಧೈರ್ಯಬೇಕು...
ವಿಷ್ಣು ಹೆಗಡೆ, ಕುಮಟಾ