ಹಲೋ, ನಾನು ರೂಪಾಯಿ
ನನ್ನ ಕಥೆ ಕೇಳಿ
ಹುಟ್ಟಿದಾಗಿನಿಂದ
ಮೌಲ್ಯ ಕಳೆದುಕೊಳ್ಳುತ್ತಲೇ ಇದ್ದೇನೆ
ಅಪಮೌಲ್ಯ ಹೊಸತಲ್ಲ ನನಗೆ
ಆದರೆ, ದಿಢೀರ್
ಕುಸಿದಿರುವುದು
ಇದೇ ಮೊದಲು ನಾನು
ಒಂದೆಡೆ 'ದೊಡ್ಡಣ್ಣ'ನ ಆಘಾತ
ಇನ್ನೊಂದೆಡೆ ದೇಶೀಯ ಕುಸಿತ
ಹೊರ ಹರಿವು ಹೆಚ್ಚಿದೆ
ಒಳ ಹರಿವು ಕಡಿಮೆಯಾಗಿದೆ
ಬಡವಾಗಿರುವೆ, ಸೊರಗಿರುವೆ
ನನ್ನ ಕುಸಿತ ತಡೆಯಲು
ಆರ್ಬಿಐನ ಕ್ರಮ
ಫಲ ಕೊಡಲಿಲ್ಲ
ವಿತ್ತ'ತಜ್ಞ'ರ ಜ್ಞಾನ
ಉಪಯೋಗಕ್ಕೆ ಬರಲಿಲ್ಲ
ಪರಿಣಾಮ ಪತಾಳಕ್ಕಿಳಿದೆ
ನೀವಾದರೂ ನನ್ನ ಕುಸಿತ
ತಡೆಯಲು ಪ್ರಯತ್ನಿಸಿ
ಪೆಟ್ರೋಲ್ ಕಡಿಮೆ ಉಪಯೋಗಿಸಿ
ದೇಶೀಯ ಉತ್ಪನ್ನ ಬಳಸಿ
ಚಿನ್ನದ ಮೋಹ ಕಡಿಮೆ ಮಾಡಿ
ಆಮದು ಅವಲಂಬಿತ
ಐಷಾರಾಮಿ ವಸ್ತುಗಳ
ಖರೀದಿಗೆ ಮಿತಿ ಹಾಕಿ
ನನ್ನ ಜೀವ ಉಳಿಸಿ
ನಾನು ಮತ್ತಷ್ಟು ಕುಸಿದರೆ
ಬದುಕು ಭಾರವಾಗಲಿದೆ
ದರ ಏರಿಕೆಯ ಬಿಸಿ ತಟ್ಟಲಿದೆ
ವಿಷ್ಣು ಹೆಗಡೆ, ಕುಮಟಾ
ಭೂತಾಯಿ ಮೆರವಣಿಗೆ
ಹೊರಟಿದ್ದಾಳೆ
ನವವಧುವಿನಂತೆ
ಸಿಂಗರಿಸಿಕೊಂಡು
ಚೆಲುವಿಗೆ ಮನಸೋತ
ತಾರೆಗಳು
ಮೋಡದಲ್ಲಿ ಅಡಗಿ
ಕುಳಿತಿವೆ
ಅಸೂಯೆಯಿಂದ!
ವಿಷ್ಣು ಹೆಗಡೆ, ಕುಮಟಾ
ಮಳೆಯೋ ಮಳೆ
ಭುವಿ-ಬಾನು ಒಂದಾಗುವಂತೆ
ಭೂಮಿ ನಡುಗಿತು
ಬಾಯ್ತೆರೆಯಿತು
ಮನೆಯೇನು, ಪ್ರಾಣವೂ ಹಾರಿತು
ಪ್ರಳಯಾರ್ಭಟಕ್ಕೆ
ವರುಣನ ಮುನಿಸಿಗೆ
ಎಲ್ಲ ಅಯೋಮಯ
ಸಾವಿಗೆ ಶರಣಾಯಿತು
ರಾಶಿ ರಾಶಿ ಜೀವ
ಎಲ್ಲಿ ನೋಡಿದರೆಲ್ಲಿ
ಗುರುತು ಸಿಗದ ಶವಗಳು
ಪಾಳು ಬಿದ್ದ ಆಸ್ತಿ
ಕುಸಿದ ಕಟ್ಟಡಗಳು
ನೊಂದವರ ಆಕ್ರಂದನ
ಮುಗಿಲು ಮುಟ್ಟಿತ್ತು
ಪ್ರಕೃತಿ ಮುನಿದಂತಿತ್ತು
ಮಾನವನ ದುರಾಸೆಗೆ
ವಿಷ್ಣು ಹೆಗಡೆ, ಕುಮಟಾ
ನೀ ಒಮ್ಮೆ ನಕ್ಕಾಗ
ನಕ್ಕು ನೀ ನಲಿದಾಗ
ಕವಿತೆಯೊಂದು ಹುಟ್ಟಿತು
ಇದು, ನಿನ್ನಿಂದಲೇ
ನಿನ್ನ ತುಟಿಯಂಚಿನ
ನಗೆಯಿಂದಲೇ!
ಆದರೆ, ಬರೆಯಲು
ಪದಗಳೇ ಇಲ್ಲ
ಹೇಗೆ ಪೂರ್ತಿ ಗೊಳಿಸಲಿ
ಹೇಳು...?
ನಿನ್ನ ಕವಿತೆಗೆ
ನೀನೇ ಮೊದಲ ಸಾಲು
ಬರೆದು ಹೋಗು!
ವಿಷ್ಣು ಹೆಗಡೆ, ಕುಮಟಾ
ಈ ಸಂಜೆಯ
ಹೊಂಬಿಸಿಲಲಿ
ಹೊಸ ಕನಸಿನ
ಜನನ
ತಣಿದ ತನುಮನ
ನವೋಲ್ಲಾಸದ ದಿನ
ವಿಷ್ಣು ಹೆಗಡೆ, ಕುಮಟಾ
ನಿನ್ನೊಲುಮೆ
ಅಲೆ ಅಲೆಯಾಗಿ
ಅಪ್ಪಳಿಸಿ
ನನ್ನೊಡಲ ಕಡಲ
ಕದಡಿದೆ
ನಿನ್ನ ನೆನಪುಗಳು
ನನ್ನೊಳಗೆ ತುಂಬಿ
ಭಾವನೆಗಳಿಗೆ ಜೀವಬಂದು
ಹೃದಯವೀಣೆ
ಮಿಡಿಯುತಿದೆ
ನಿನ್ನ ನಾದವ
ವಿಷ್ಣು ಹೆಗಡೆ, ಕುಮಟಾ