Friday, December 23, 2011

ಷೇರುಪೇಟೆ ಜೂಜುಕಟ್ಟೆಯಲ್ಲ...


ಜಗತ್ತು ಮತ್ತೊಂದು ಆರ್ಥಿಕ ಹಿಂಜರಿತದತ್ತ ಜಾರುತ್ತಿದ್ಯಾ..? ಎಲ್ಲರನ್ನ ಕಾಡುತ್ತಿರೋ ಯಕ್ಷ ಪ್ರಶ್ನೆ ಇದು. ಗ್ರೀಸ್ ನಲ್ಲಿ
ಶುರುವಾದ ಬಿಕ್ಕಟ್ಟು ಈಗ ಯುರೋಪಿಯನ್ ರಾಷ್ಟ್ರಗಳಿಗೂ ಆವರಿಸಿದೆ.. ಪೋರ್ಚುಗಲ್, ಇಟಲಿ, ಸ್ಪೇನ್ ಸಾಲದ ಸುಳಿಗೆ ಸಿಲುಕಿವೆ.. ಈ ಕಂಪನ ಯುರೋಪಿಯನ್ ರಾಷ್ಟ್ರಗಳ ಆರ್ಥಿಕತೆಯನ್ನೇ ಅಲ್ಲಾಡಿಸುತ್ತಿದೆ.. ಹಿಂಜರಿತದ ಸುನಾಮಿ ಭಾರತಕ್ಕೂ ಬಂದು ಅಪ್ಪಳಿಸಿದ್ದು, ಕಳೆದ ನಾಲ್ಕೈದು ತಿಂಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಂಪನ ಶುರುವಾಗಿದೆ.. ಈ ಅಪಾಯಕಾರಿ ಬೆಳವಣಿಗೆ ನ್ಯೂಯಾರ್ಕ್ , ಶಾಂಘೈಯಿಂದ ಹಿಡಿದು ಭಾರತದ ಷೇರುಮಾರುಕಟ್ಟೆಗಳನ್ನೂ ಕಾಡುತ್ತಿದೆ.. ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ, ಎಫ್ಎಂಸಿಜಿ, ಶುಗರ್, ಸ್ಟೀಲ್ ಸೆಕ್ಟರ್ ಗಳ ಷೇರುಗಳು ಪಾತಾಳಕ್ಕಿಳಿದಿವೆ.. ಉಳಿದ ವಲಯಗಳ ಷೇರುಗಳೂ ಇದೇ ಹಾದಿಯಲ್ಲಿವೆ..

ಷೇರಿನಲ್ಲಿ ಹಣ ಹೂಡಿದವರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.. ನಾನೂ ಕೂಡಾ..!! ಏನಿಲ್ಲ ಅಂದ್ರೂ ಸುಮಾರು 30 ರಿಂದ 40 ಪರ್ಸೆಂಟ್ ಹಣ ಮಂಗಮಾಯವಾಗಿದೆ.. ಕೊಂಡಾಗ 700 ರೂಪಾಯಿ ಇದ್ದ ಸಂಡೂರ್ ಮ್ಯಾಂಗನೀಸ್ ಈಗ 290ಕ್ಕೆ ಕುಸಿದಿದೆ.. 320ರಷ್ಟಿದ್ದ ಸೀಸಾ ಗೋವಾ 159ಕ್ಕೆ ಇಳಿದಿದೆ.. 58 ರೂಪಾಯಿ ಇದ್ದ ರೇಣುಕಾ ಶುಗರ್ ದಿಢೀರ್ ಜಾರಿಬಿದ್ದು 25ಕ್ಕೆ ಬಂದು ನಿಂತಿದೆ.. ಈ ಎಲ್ಲಾ ಷೇರುಗಳ ಬೆಲೆ ಸದ್ಯಕ್ಕಂತೂ ಏರುವ ಲಕ್ಷಣ ಇಲ್ಲ... ನನಗೂ ಮಾರುವ ಮನಸ್ಸಿಲ್ಲ.. ಆದ್ರೆ, ಒಂದಿಷ್ಟು ಷೇರುಗಳು ಲಾಭ ತಂದುಕೊಟ್ಟಿವೆ.. ಮಹೀಂದ್ರಾ & ಮಹೀಂದ್ರಾ, ಟಾಟಾ ಮೋಟಾರ್, ಅಲಹಾಬಾದ್ ಬ್ಯಾಂಕ್ ಷೇರುಗಳನ್ನ ಲಾಭದಲ್ಲಿರುವಾಗ್ಲೆ ಮಾರಿ, ಬಚಾವಾಗಿದ್ದೇನೆ.. ಎಲ್ಲಾ ಲೆಕ್ಕಾಚಾರ ಹಾಕಿದ್ರೆ, ಕೂಡಿ ಕಳೆದ್ರೆ ಅಲ್ಲಿಂದ ಅಲ್ಲಿಗೆ.. ನೆಚ್ಚಿನ ಸ್ಟ್ರಿಪ್ಟ್ ಹಿಂಡಾಲ್ಕೊನೂ ಕೈಬಿಟ್ಟಿಲ್ಲ.. ಹೀಗಾಗಿ ದುಡಿದಿದ್ದೇ ಹೊಯ್ತು ಅಂತಾ ನಾನೆನೋ ಸುಮ್ನಾಗಬಹುದು.. ಆದ್ರೆ, ಸಾಲಮಾಡಿ ಇನ್ ವೆಸ್ಟ್ ಮಾಡಿದವರ ಕಥೆ ಏನು..? ದುಡಿದ ಎಲ್ಲಾ ದುಡ್ಡಿನ್ನ ಹೂಡಿಕೆ ಮಾಡಿದವರ ಪಾಡೇನು..?

ನನ್ನ ಸ್ನೇಹಿತ(ರವಿ) ಷೇರು ಮಾರ್ಕೆಟ್ "ಜೂಜು" ಅಂತಾನೆ.. ಆತನಿಗೆ ಷೇರಿನ ಬಗ್ಗೆ ಎಬಿಸಿಡಿಯೂ ಗೊತ್ತಿಲ್ಲ.. ಆದ್ರೂ, ಮಾತಾಡ್ತಾನೆ..! ಷೇರುಕ್ಷೇತ್ರ ಬಿಟ್ಟು ಬೇರೆ ವಿಷ್ಯದಲ್ಲಿ ಬುದ್ಧಿವಂತ.. ಆದ್ರೆ, ಖಂಡಿತವಾಗೂ ಷೇರ್ ಮಾರ್ಕೆಟ್ ಜೂಜುಕಟ್ಟೆಯಲ್ಲ.. ಅಲ್ಲಿ ಪ್ರತಿ ಏರಿಳತಕ್ಕೂ ಕಾರಣ ಇರುತ್ತೆ. ಕಂಪನಿಯ ಅಭಿವೃದ್ಧಿ ಮೇಲೆ ಎಲ್ಲಾ ನಿಂತಿದೆ.. ಕಂಪೆನಿ ಉತ್ತಮ ಸಾಧನೆ ತೋರಿಸಿದ್ರೆ ಷೇರುಗಳು ಗಗನಮುಖ.. ಇಲ್ಲದಿದ್ರೆ ಪಾತಾಳಕ್ಕೆ.. ಹಾವು-ಏಣಿ ಆಟಕ್ಕೆ ಅಂತಾರಾಷ್ಟ್ರೀಯ ಬೆಳವಣಿಗೆಗಳೂ ಕಾರಣ.. ವಿಶ್ವದಲ್ಲಾಗೊ ಆರ್ಥಿಕ ಬದಲಾವಣೆಗಳಿಗೆ ತೀವ್ರವಾಗಿ ಸ್ಪಂದಿಸುತ್ತೆ ಮಾರುಕಟ್ಟೆ.. ಈ ಸೂತ್ರದ ಮೇಲೆಯೇ ಕಂಪೆನಿಯ ಷೇರುಗಳ ಕುಣಿತ..

 ಒಂದು ಕಂಪನಿಯಲ್ಲಿ ಪ್ರಮೋಟರ್ ಪಾಲು ಎಷ್ಟಿದೆ..? ಆ ಷೇರು ಎಷ್ಟರ ಮಟ್ಟಿಗೆ ವಿದೇಶಿ ಹೂಡಿಕೆದಾರರ ಮನಗದ್ದಿದೆ..? ವಾಲ್ಯುಮ್ ಎಷ್ಟಿದೆ..? ಮುಖಬೆಲೆಯೆಷ್ಟು? ಇಪಿಎಸ್ ಹೇಗಿದೆ..? ಕಂಪನಿಯ ಕಾರ್ಯಕ್ಷಮತೆ, ಯೋಜನೆ, ದೂರದೃಷ್ಟಿ, ಆಡಳಿಮಂಡಳಿ ಯಲ್ಲಿ ಯಾರಿದ್ದಾರೆ..? ಈ ಎಲ್ಲಾ ಅಂಶಗಳನ್ನ ನೋಡಿ ಹೂಡಿಕೆ ಮಾಡಬೇಕು.. ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು.. ಯಾರದೊ ಮಾತನ್ನ ಕೇಳಿ, ಬ್ರೋಕರ್ ಮಾತನ್ನ ನಂಬಿ ಹಣ ಹೂಡಿದ್ರೆ ಏನ್ ಬೇಕಾದ್ರೂ ಆಗ್ಬಹುದು.. ಇಂತ ಸಮಯದಲ್ಲಿ ಹಣ ಕಳೆದುಕೊಳ್ಳೋದೆ ಜಾಸ್ತಿ..

ಕೆಲವೊಂದು ಷೇರುಗಳು ತುಂಬಾ ಅಪಾಯಕಾರಿ. 30 ರೂಪಾಯಿ ಇದ್ದ ಷೇರು ಕೆಲವೇ ದಿನಗಳಲ್ಲಿ 70-80 ರೂಪಾಯಿ ಆಗಿಬಿಡುತ್ತೆ. ಆಗ ಒಂದು ರೂಮರ್ ಹರಡುತ್ತೆ. ಆ ಷೇರು ಇನ್ನೂ ಏರುತ್ತೆ ಅಂತಾ.. ಹೊಸದಾಗಿ ಪೇಟೆಗೆ ಎಂಟ್ರಿಕೊಟ್ಟವರು ಮತ್ತೂ ಏರುತ್ತೆ ಅಂತಾ ಖರೀದಿಸುತ್ತಾರೆ. ಇಂತ ಸಮಯದಲ್ಲಿ ಕೃತಕ ಬೇಡಿಕೆ ಸೃಷ್ಟಿಸಿದವರು ಮಾರಿ ಲಾಭ ಮಾಡಿಕೊಳ್ತಾರೆ.. ಕೊಂಡುಕೊಂಡವನು ಮಾತ್ರ ಕೋಡಂಗಿ..

ನನ್ನ ಮತ್ತೊಬ್ಬ ಸ್ನೇಹಿತ(ರಾಜು).. ಈತನದ್ದು ವಿಚಿತ್ರ ನಂಬಿಕೆ.. ಅತಿಯಾದ ಧೈರ್ಯ. ಇವತ್ತು ಇಳಿದಿದೆ, ನಾಳೆ ಏರುತ್ತೆ..
ಮೂರುದಿನದಿಂದ ಡೌನ್ ಆಗ್ತಾನೆ ಇದೆ, ಇಂದು ಪುಟಿದೇಳುತ್ತೆ.. ಈ ತರ ಗೆಸ್ ಮಾಡಿ, ಹಣ ಕಳೆದುಕೊಂಡಿದ್ದಾನೆ.. ಈಗ ಷೇರಿನ ಹೆಸರೆತ್ತಿದ್ರೆ ಸಾಕು ಸಿಡಿಯುತ್ತಾನೆ.. ಮಾರ್ಕೆಟಿನ ಸಹವಾಸವೇ ಬೇಡ ಅಂತಾ ಸುಮ್ಮನಾಗಿದ್ದಾನೆ.. ಮಾರ್ಕೆಟ್ ಕಡೆ ಮುಖ ಹಾಕಿ ಕೂಡಾ ಮಲಗಲ್ವಂತೆ.. ನನಗಂತೂ ಈ ಸ್ಥಿತಿಯಿಲ್ಲ.. ಕೆರೆಯ ನೀರನ್ನ ಕೆರೆಗೆ ಚಲ್ಲಿದ್ದೇನೆ.. ಲಾಸ್ ಆಗಿಲ್ಲ.. ಜೇಬಿಗೆ ಹಣ ಬಂದಿಲ್ಲ.. ಆದ್ರೆ, ಕಲಿತಿದ್ದು ಮಾತ್ರ ಲಾಭ.. ಮುಂದೊಂದು ದಿನ ಹೆಲ್ಪ್ ಆಗೇ ಆಗುತ್ತೆ..

ಷೇರು ಮಾಯಾಲೋಕವಲ್ಲ.. ಜೂಜಲ್ಲ.. ಗೊತ್ತಿಲ್ಲದಿದ್ದವರಿಗೆ ಅದು ನಿಗೂಢಲೋಕ ಅನಿಸುತ್ತದೆ ಅಷ್ಟೆ..!!!

ವಿಷ್ಣು ಹೆಗಡೆ , ಕುಮಟಾ


Wednesday, December 14, 2011

ಅಕ್ವೇರಿಯಂ...




ಹವ್ಯಾಸವೇ ಹಾಗೆ.. ಒಬ್ಬರಿಂದ ಒಬ್ಬರಿಗೆ ವಿಭಿನ್ನ. ಮನೆಯಲ್ಲಿ ನಾಯಿಯನ್ನೊ, ಬೆಕ್ಕನ್ನೊ ಸಾಕೋದು ಕಾಮನ್. ಕೆಲವರು ಒಂದ್ ಹೆಜ್ಜೆ ಮುಂದೆ ಹೋಗಿ ಹಾವು, ಚೇಳು, ಕೋತಿಗಳನ್ನ ಸಾಕ್ತಾರೆ..! ಇಂತ ತಿಕಲು ಪ್ರಾಣಿಪ್ರಿಯರನ್ನ ನೋಡಿ, ಆಶ್ಚರ್ಯವಾಗಿದೆ.. ಆದ್ರೆ,  ನಾನು ಸದಭಿರುಚಿಯ ಹವ್ಯಾಸಿ..! ರೂಮಿನಲ್ಲೆ ಒಂದು ಚಿಕ್ಕ ಅಕ್ಚೇರಿಯಂ ಮಾಡಿದ್ದೇನೆ..!! 

ಸುಮಾರು 15 ಲೀಟರ್ ನೀರು ಹಿಡಿಯೊ ಚಿಕ್ಕ ಟ್ಯಾಂಕ್ ಇದೆ. ಏಂಜಲ್, ಟೈಗರ್, ಲಯನ್ ಹೆಡ್, ವೈಟ್ ಅರೋನಾ.. ಹೀಗೆ ಹತ್ತಾರು ಜಾತಿಯ ಮೀನುಗಳಿವೆ.. ಅದ್ರಲ್ಲಿ ಗೋಲ್ಡ್ ಫಿಶ್ ಅಂದ್ರೆ ತುಂಬಾ ಪ್ರೀತಿ.. ಅವುಗಳ ಬಂಗಾರದ ದೇಹಕ್ಕೆ , ಹೊಳೆಯುವ ಕಣ್ಣುಗಳಿಗೆ ಎಂಥವರನ್ನ ಆಕರ್ಷಿಸುವ ಶಕ್ತಿ ಇದೆ.. ಕತ್ತಲಾದಾಗ ಅಕ್ವೇರಿಯಂ ಟ್ಯೂಬ್ ಲೈಟ್ ಆನ್ ಮಾಡಿದ್ರೆ ಸಾಕು ಗೋಲ್ಡ್ ಫಿಶ್ ಗಳ ಚಲ್ಲಾಟ ಬೆರಗುಗೊಳಿಸುತ್ತೆ.. ರೆಕ್ಕೆಯನ್ನ ಹಿಂದಕ್ಕೆ ಚಾಚುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವುದನ್ನ ನೋಡೋದೆ ಮನಸ್ಸಿಗೆ ಮುದ.. ಒತ್ತಡದಿಂದ ರಿಲ್ಯಾಕ್ಷ್ ಆಗ್ಲಿಕ್ಕೆ ಅಕ್ವೇರಿಯಂ ಒಳ್ಳೆ ಮದ್ದು ಅಂತಾ ಸ್ನೇಹಿತ ಹೇಳಿದ ಮಾತನ್ನ ನೆನಪಿಸಿಕೊಂಡೆ.. ನಿಜ ಅನಿಸಿತ್ತು..


 ಆದ್ರೀಗ ನನ್ನ ಮುದ್ದಿನ ಗೋಲ್ಡ್ ಫಿಶ್ ಇಲ್ಲ.. ಅದ್ರ ಪ್ರಾಣಪಕ್ಷಿ ಹಾರಿಹೋಗಿ ಒಂದುವಾರವೇ ಆಯ್ತು.. ಯಾಕೆ ಸತ್ತಿತು ಅಂತಾ ಯೋಚಿಸುತ್ತಲೆ ಇದ್ದೇನೆ.. ಸಾಯುವ ಕೆಲ ವಾರಗಳ ಮೊದ್ಲು ಲವಲವಿಕೆ ಕುಂಠಿತಗೊಂಡಿತ್ತು.. ಆಹಾರವನ್ನೂ ತಿನ್ನದೆ ಅಡ್ಡಾ-ದಿಡ್ಡಿಯಾಗಿ ಬಿದ್ದುಕೊಂಡಿತ್ತು. ಟ್ಯಾಂಕ್ ಕ್ಲೀನ್ ಮಾಡಿ, ನೀರು ಚೇಂಜ್ ಮಾಡಿದ್ರೆ ಸರಿಹೋಗಬಹುದು ಅಂದುಕೊಂಡೆ.. ವೈಟ್ ಸ್ಪಾಟ್ ಗೆ ಔಷಧವನ್ನೂ ಹಾಕಿದೆ.. ಆದ್ರೆ, ಬೆಳಗಾಗೋದ್ರೊಳ್ಗೆ ಸುತ್ತು, ಟ್ಯಾಂಕ್ ನಲ್ಲಿ  ತೇಲುತ್ತಿತ್ತು.. ಆ ಮೀನಿನ ಸೊಬಗನ್ನ ನೋಡುತ್ತಿದ್ದ  ನನಗೆ ಸಾವನ್ನೂ ನೋಡೊ ಪರಿಸ್ಥಿತಿ.. ದು:ಖ ತಡೆಯಲಾಗಲಿಲ್ಲ..


ವಿಷ್ಣು ಹೆಗಡೆ, ಕುಮಟಾ

Tuesday, December 13, 2011

ಗ್ರಹಣವೆಂದರೆ ಭಯವೇಕೆ..?



ಮೊನ್ನೆ ಚಂದ್ರಗ್ರಹಣ ಸಂಭವಿಸಿದಾಗ ಚಂದಿರನ ಲೋಕಕ್ಕೆ ಜಾರಿದೆ. ಆದ್ರೆ, ಗ್ರಹಣದ ಕುರಿತ ಮೂಢನಂಬಿಕೆಗಳು ತುಂಬಾ ಗೊಂದಲಕ್ಕೀಡುಮಾಡಿತ್ತು. ಗೊಡ್ಡು ಕಥೆಗಳ ಬಗ್ಗೆ ಬೇಸರ ಹುಟ್ಟಿತ್ತು.. ಗ್ರಹಣಕಾಲದಲ್ಲಿ ಊಟ ಮಾಡಬಾದರು, ಹೊರಗಡೆ ಹೋಗಬಾರದು, ಚಂದ್ರನನ್ನ ನೋಡಬಾರದು.... ಹೀಗೆ ಒಂದಾ, ಎರಡಾ..? ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇತ್ತು.

ಆದ್ರೆ, ಆಗಿದ್ದು ಆಗ್ಲಿ ( ಏನೂ ಆಗಲ್ಲ ಅಂತಾ ಗೊತ್ತು..!) ನಾನು ಮಾತ್ರ ಚಂದ್ರಗ್ರಹಣವನ್ನ ನೋಡಲೇಬೇಕೆಂದು ಶಪಥ ಮಾಡಿದ್ದೆ.. ಪ್ರಕೃತಿ ವಿಸ್ಮಯದ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದೆ. ಸಾಯಂಕಾಲ ಆಗುತ್ತಿದ್ದಂತೆ ಟೆರೆಸ್ ಹತ್ತಿ ಕುಳಿತಿದ್ದೆ.. ನಿಗದಿತ ಸಮಯಕ್ಕೆ ಬಾನಂಚಿನಲ್ಲಿ ಚಂದ್ರ ನಿಧಾನವಾಗಿ ಬಂದ.. ಸುತ್ತಲೂ ಕೆಂಪು ಪ್ರಭಾವಲಯ. ನೀರವ ರಾತ್ರಿಯಲ್ಲಿ ಚಳಿಗಾಳಿಯ ಮಧ್ಯೆ ನೀಲಿಯಾಕಾಶವನ್ನ ನೋಡೋದೆ ರೋಮಾಂಚನ.. ಮನಸ್ಸಿಗೆಲ್ಲ ಕಚಗುಳಿಯಾದ ಅನುಭವ.. ಏಕಾಂಗಿಯಾಗಿ, ಏಕಾಗ್ರತೆಯಿಂದ ಆಕಾಶ ನೋಡುತ್ತಲೇ ನಿಂತಿಬಿಟ್ಟೆ.. ಚಂದ್ರಗ್ರಹಣ ನೋಡಿ ಖುಷಿಪಟ್ಟೆ. ಕತ್ತಲು ಆವರಿಸಿದಂತೆ ಚಂದ್ರನನ್ನ ಛಾಯೆಗಳು ಆವರಿಸಿದವು. ಹಾಗೆಯೇ ಪೂರ್ತಿ ಗ್ರಹಣವನ್ನ ವೀಕ್ಷಿಸಿದೆ.. ಪ್ರಕೃತಿ ವೈಚಿತ್ರ್ಯಕ್ಕೆ ಬೆರಗಾದೆ. ದಂಗಾದೆ. ಚಂದಮಾಮನ ಕ್ಲೋಸಪ್ ಚಿತ್ರಗಳೇ ಮನಸ್ಸನ್ನ ಆವರಿಸಿದ್ದವು.. ಬಂದು ಮಲಗಿದರೂ, ಮನದಲ್ಲಿ ಚಂದಿರ ಬೆಳಗುತ್ತಿದ್ದ..


ಇಲ್ಲಿ ಒಂದು ಮಾತನ್ನ ಹೇಳಲೇಬೇಕು. ಚಂದ್ರಗ್ರಹಣದ ಹಿಂದಿನ ದಿನ ಮಾಧ್ಯಮದಲ್ಲಿ ಸಾಧಕ-ಬಾಧಕಗಳದ್ದೇ ಚರ್ಚೆ. ಜ್ಯೋತಿಷಿಗಳಿಂದ ವಿಶ್ಲೇಷಣೆ.. ಆ ನಕ್ಷತ್ರದವರಿಗೆ ಕೆಡುಕಾಗುತ್ತೆ.. ಈ ರಾಶಿಯವರಿಗೆ ಒಳ್ಳೆಯದು.. ಇನ್ನೊಂದು ಕಡೆ ದುರ್ಬಲ ಮನಸ್ಸಿನ ಒಂದಿಷ್ಟು ಜನ ಫೋನ್ ನಲ್ಲಿ ಪರಿಹಾರ ಕೇಳುತ್ತಿದ್ರು. ಗೋದಾನ ಮಾಡಬೇಕು, ಬಟ್ಟೆದಾನ ಮಾಡಬೇಕು ಅನ್ನೊ ಉತ್ತರ ಜ್ಯೋತಿಷಿಗಳದ್ದು.. ಜನರು ಇಂಥದನ್ನ ನಂಬುತ್ತಾರೆಯೇ ಅಂತಾ ಅಚ್ಚರಿಯಾಯ್ತು..! 

ನನಗೆ ಜ್ಯೋತಿಷ್ಯದ ಶಕ್ತಿಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಆದ್ದರಿಂದ ಅದರಲ್ಲಿ ದೋಷವಿದೆ ಅಂತಾ ಹೇಳಲಾರೆ.. ಆದ್ರೆ, ಧರ್ಮದ ಹೆಸರಿನಲ್ಲಿ ಮೂಢನಂಬಿಕೆಗಳನ್ನ ಹೇರುವುದು ಎಷ್ಟು ಸರಿ.? ವೇದ, ಪುರಾಣ, ಧರ್ಮದ ಹೆಸರಿನಲ್ಲಿ ಅಂಧಾಚರಣೆ ಯಾಕೆ..?

ವಿಷ್ಣು ಹೆಗಡೆ , ಕುಮಟಾ


Thursday, December 8, 2011

ಬಹಿಷ್ಕಾರವೇ ಲೇಸು...


ಒಲಿಂಪಿಕ್ಸ್ ಶಾಂತಿಯ ಆಚರಣೆ. ಸಮಾನತೆ ಸಾರೊ ಸಾಧನ.. ಐಕ್ಯತೆಯ ಸಂಕೇತ. ಆಟಗಳ ನಡುವಿನ ಅಂತರ ಬೆಸೆಯುವ ವೇದಿಕೆ.. ಆದರೆ, 2012ರಲ್ಲಿ ಲಂಡನ್ನಲ್ಲಿ ನಡ್ಯೊ ಒಲಿಂಪಿಕ್ಸ್ ಇದ್ಕೆ ತದ್ವಿರುದ್ಧ. ಜಾಗತಿಕ ಕ್ರೀಡಾಹಬ್ಬದ ಮೂಲತತ್ವಗಳಿಗೆ ಇಲ್ಲಿ ಬೆಲೆಯೇ ಇಲ್ಲ. ಸಾವಿರಾರು ಕುಟುಂಬವನ್ನ ಬೀದಿಗೆ ತಂದ, ಲಕ್ಷಾಂತರ ಜನರ ಪ್ರಾಣ ಕಿತ್ತುಕೊಂಡ "ಡೌ" ರಾಸಾಯನಿಕ ಕಂಪೆನಿಯೇ ಲಂಡನ್ ಒಲಿಂಪಿಕ್ಸ್ ಪ್ರಾಯೋಜಿಸುತ್ತಿದೆ..! ಎಂಥಾ ವಿಪರ್ಯಾಸ ನೋಡಿ..!!


 ದುರಂತದಲ್ಲಿ ಬಲಿಯಾದವರಿಗೆ ದಶಕಗಳು ಕಳೆದರೂ ಪರಿಹಾರ ಹಣವನ್ನೇ ಕೊಟ್ಟಿಲ್ಲ.. ಆದ್ರೆ, ಒಲಿಂಪಿಕ್ಸ್ ನಂತಹ ಕ್ರೀಡಾಮೇಹಾಳವನ್ನ ಆಯೋಜಿಸೋದಕ್ಕೆ ಬೇಕಾದಷ್ಟು ದುಡ್ಡಿದೆ..!! ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಇದನ್ನ ಪ್ರಶ್ನಿಸದಿರೋದು ನಿಜಕ್ಕೂ ಆಶ್ಚರ್ಯ. ಪ್ರಪಂಚಕ್ಕೆ ಇದೊಂದು ದೊಡ್ಡ ವಿಷಯವಲ್ಲದಿರಬಹುದು. ಆದ್ರೆ, ನಮಗೆ..? ಅಮಾಯಕ ಜೀವಗಳನ್ನ ಬಲಿಪಡೆದ ಘಟನೆಯನ್ನ ನೆನೆಸಿಕೊಂಡ್ರೆ ಮೈಯೆಲ್ಲ ಕುದಿಯುತ್ತೆ. ಅವ್ರ ಆಕ್ರಂದನ ಕಣ್ಮುಂದೆ ಹಾದಿಹೋದಾಗ ಹೃದಯತಲ್ಲಣಿಸುತ್ತೆ..


ನೆತ್ತರಿನ ಚರಿತ್ರೆ ಹೊಂದಿರೊ ಸಂಸ್ಥೆಯೊಂದರ ಪ್ರಾಯೋಜಕತ್ವ ಸ್ವೀಕರಿಸೋದು ಒಲಿಂಪಿಕ್ಸ್ ಮೂಲನೀತಿಗೆ ವಿರುದ್ಧವಾದುದ್ದು. ಹೀಗಾಗಿ ಭಾರತೀಯರು ಈ ಕ್ರೀಡಾಕೂಟವನ್ನ ಬಹಿಷ್ಕರಿಸೋದೆ ಲೇಸು. ಈ ಹಿಂದೆ ಒಲಿಂಪಿಕ್ಸ್ ಕ್ರೀಡೆಯನ್ನ ಕೆಲ ದೇಶಗಳು ಬಹಿಷ್ಕರಿಸಿದ ಉದಾಹರಣೆಗಳಿವೆ.. ನಾವು ಯಾಕೆ ಹಾಗೆ ಮಾಡಬಾರದು..?? ನಮ್ಮ ದೇಶಕ್ಕೆ ಬಂದು, ನಮ್ಮವರನ್ನೇ ಬಲಿತೆಗೆದುಕೊಂಡು ಪಲಾಯನ ಮಾಡಿರೊ "ಡೌ" ಸಂಸ್ಥೆಯ ಮಾಲೀಕನಿಗೆ ದಿಕ್ಕಾರ ಹೇಳಲೇ ಬೇಕು.. ದುರಂತದಲ್ಲಿ ಮಡಿದವರಿಗೆ ಗೌರವ ಸಲ್ಲಿಸೋದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.. ಇದ್ಕೆ ಕ್ರೀಡಾಪಟುಗಳು ಹೊರತಲ್ಲ..

ವಿಷ್ಣು ಹೆಗಡೆ , ಕುಮಟಾ



Friday, December 2, 2011

ಕಣ್ಣಿಗೆ ಕಾಣುವ ದೇವರು...


ಆಫೀಸ್ನಲ್ಲಿ ಒತ್ತಡ ಜಾಸ್ತಿಯಾದಾಗ, ಹಿತಶತ್ರುಗಳು ಕಿರಿಕಿರಿ ಮಾಡಿದಾಗ, ಕೈಕೊಟ್ಟು ಹೋದ ಗೆಳೆಯ-ಗೆಳೆತಿಯರು ಕಾಡಿದಾಗ, ಜಂಜಾಟಗಳಿಂದ ಬದುಕು ಭಾರವಾದಾಗ, ಯಾರಲ್ಲೂ ಹೇಳಿಕೊಳ್ಳದ ದು:ಖ ಅಪ್ಪಳಿಸಿದಾಗ, ಅಮ್ಮನ ನೆನಪಾಗುತ್ತೆ.. ಕ್ಷಣ ಮಾತ್ರದಲ್ಲೇ ಮನಸ್ಸು ಮಲ್ಲಿಗೆಯಾಗುತ್ತೆ.. ಹೃದಯ ತಂಪಾಗುತ್ತೆ. ಹಗುರವಾಗುತ್ತೆ. ಬದುಕೆಲ್ಲಾ ನಾದಮಯ ಅನಿಸಿ ಬಿಡುತ್ತೆ. ಮನಸ್ಸಿನಾಳದಿಂದ ಉಕ್ಕೆದ್ದು ಬರುವ ಉದ್ವೇಗ ಕರಗಿಹೋಗುತ್ತೆ.. ಅದ್ಕೆ ಹೇಳೋದು ಅಮ್ಮ ಕಣ್ಣಿಗೆ ಕಾಣುವ ದೇವರು ಅಂತಾ..

ಇತ್ತಿಚೆಗೆ ಊರು ದೂರವಾದಷ್ಟು, ಮನಸ್ಸು ಭಾರವಾಗಿದೆ.. ಏಕಾಂತ ಕಾಡ್ತಿದೆ. ಮೊಗದ ಮುದ್ದಾದ ನಗು ಮಾಯವಾಗಿದೆ. ಅಮ್ಮನ ಪ್ರೀತಿ, ಅಪ್ಪನ ಅಕ್ಕರೆ, ತಂಗಿಯ ಪುಟ್ಟನಗೆ ನೆನಪಾಗ್ತಿದೆ. ಮನೆಯ ಕಡೆ ಮನಸ್ಸು ವಾಲುತ್ತಿದೆ..

ಮನೆಗೆ ಫೋನ್ ಮಾಡುವಾಗಲೆಲ್ಲಾ ಮೊದ್ಲು ನೆನಪಾಗೋದು ಅಮ್ಮನ ಮುಖ. ಅವಳ ಒಲವಿನ ಘಮ.. ಪ್ರೀತಿಯ
ಅಪ್ಪುಗೆ. ಒಬ್ಬನೇ ಕೂತು ತನ್ನ ಬಗ್ಗೆ ಯೋಚಿಸುವಂತೆ ಮಾಡುವ ಶಕ್ತಿ ಅವಳ ನಿಷ್ಕಲ್ಮಶ ಒಲವಿದೆ. ಒಮ್ಮೆಮ್ಮೊಯಂತೂ ಅಮ್ಮನನ್ನ ಬಾಚಿ ತಬ್ಬಿ, ಅವಳ ಮಡಿಲಲ್ಲಿ ಬಿಕ್ಕಿ ಬಿಕ್ಕಿ ಅತ್ತುಬಿಡಬೇಕು ಅನ್ನೋ ಮೌನಯಾತನೆ.

ಹೊಟೇಲ್ಗೆ ಹೋದರೂ ಅಮ್ಮನದ್ದೇ ನೆನಪು.. ಅಡುಗೆ ಎಷ್ಟೇ ಚೆಂದವಿದ್ದರೂ ಬಡಿಸುವ ಕೈ ಆಪ್ತವೆನಿಸುವುದಿಲ್ಲ. ಅನ್ನದಲ್ಲಿ ಪ್ರೀತಿಯ ಸುಳಿವಿರೋದಿಲ್ಲ. ಸೋಮವಾರದ ಹೋಳಿಗೆ ಊಟ ಕೂಡಾ, ಒಲಿನ ತಂಬ್ಳಿ( ಮಜ್ಜಿಗೆ ಸಾರು) ಮುಂದೆ ಸಪ್ಪೆ.. ಎಲ್ಲರೂ ಒಟ್ಟಾಗಿ ಕೂತು, ಸುದ್ದಿ ಹೇಳ್ತಾ , ತಮಾಷೆ ಮಾಡ್ತಾ ಇದ್ರೆ ಊಟಮಾಡಿದ್ದೆ ಗೊತ್ತಾಗದಂತೆ ಕಣ್ಣೆದುರಿಗಿನ ತಟ್ಟೆ ಬರಿದಾಗುವ ಆ ಮೋಡಿಯೇ ಸೊಬಗು.

ವಿಷ್ಣು ಹೆಗಡೆ, ಕುಮಟಾ



Tuesday, November 22, 2011

ಇರುವೆ ಕಂಡಾಗ..!




ಮೊನ್ನೆ ಶನಿವಾರ.. ವೀಕ್ ಆಫ್ ಇತ್ತು.. ರಿಮೋಟ್ ಹಿಡಿದು 80 ಚಾನಲ್ಗಳನ್ನ ಜಾಲಾಡಿದೆ.. ಯಾವ್ದೆ ಮೂವಿಯಾಗ್ಲಿ, ಒಳ್ಳೆ ಕಾರ್ಯಕ್ರಮವಾಗ್ಲಿ ಇರ್ಲಿಲ್ಲ.. ಮನಸ್ಸಿಗೆ ಹಿತ ಕೊಡುವ, ಮದ ನೀಡುವ ಪ್ರೋಗ್ರಾಮ್, ಊಹುಂ... ಮನಸ್ಸಿನಲ್ಲೆ ಗೊಣಗುತ್ತಾ ಮೇಲೆದ್ದೆ. ಡೋರ್ ತೆಗೆದು ಹೊರಗಡೆ ಹೋದೆ.. ನಿಧಾನವಾಗಿ ಬಿಸುತ್ತಿದ್ದ ತಂಗಾಳಿ ಕೆನ್ನೆಯನ್ನ ಸವರುತ್ತಿತ್ತು. ಇಳಿ ಸಂಜೆಯಲ್ಲಿ ಮರೆಯಾಗುವ ಅರುಣ, ಪಡುವಣದಲ್ಲಿ ಮೂಡಿಸಿದ ರಂಗುರಂಗಿನ ಚಿತ್ತಾರ, ಕಲಾವಿದನ ಕುಂಚಗಳ ಬಣ್ಣವನ್ನ ಹೀರಿದಂತೆ ಕಂಡಿದ್ದು ಸುಳ್ಳಲ್ಲ..

ಹಾಗೆ ಕೆಳಗಿಳಿದು, ಬೋಂಡಾ, ಭಜ್ಜಿ ತಿನ್ನೋಣ ಅಂತಾ ಹೊರಟೆ.. ಆದ್ರೆ, ಹೋಗಿದ್ದು ಮಾತ್ರ ಜಿಲೇಬಿ ಅಂಗಡಿಗೆ.. ಸಿಹಿಯಾದ ಜಿಲೇಬಿಯನ್ನ ಮೆಲ್ಲಗೆ ಮೆಲ್ಲುತ್ತಿದ್ದೆ.. ಬಾಯಿಂದ ಜಾರಿ ಚಿಕ್ಕದೊಂದು ತುಂಡು, ಧಪ್ ಅಂತಾ ಕೆಳಗೆ ಬಿತ್ತು.. 'ಬಿಟ್ಹಾಕು' ಅಂತು ಮನಸ್ಸು.. ಕ್ಷಣಾರ್ಧದಲ್ಲೆ ಚಿಕ್ಕದೊಂದು ಇರುವೆ ದರ್ಶನ. ಅದನ್ನ ನೋಡುತ್ತಿದ್ದ ನನಗೆ ಅಚ್ಚರಿ.. ಜಿಲೇಬಿ ತುಂಡಿನ ಸಣ್ಣ ಸಂದಿಯಿಂದ, ಒಂದೊಂದೆ ಇರುವೆ ಹೊರಗಡೆ ಬರಲಾರಂಬಿಸಿತು.. ಕೈಯಲ್ಲಿದ್ದ ಜಿಲೇಬಿಯನ್ನ ನೋಡಿದೆ.. ಇರುವೆಗಳ ಸಾಲೆ ಇತ್ತು.. ಊಫ್ ಅಂತಾ ಉಗಿದು, ಅಂಗಡಿಯವನಿಗೆ ಹಣಕೊಟ್ಟು, ಬೈಯುತ್ತಾ ಬಂದೆ.. ಬಿಸಿ ಬಿಸಿ ಟೀ ಯನ್ನಾದ್ರು, ಕುಡಿಯೋಣ ಅಂತಾ ಹಾಲು ತಂದೆ.. ಸಕ್ಕರೆ ಡಬ್ಬ ತೆಗೆದ್ರೆ, ಅಲ್ಲೂ ಶಿಸ್ತಿನ ಸಿಪಾಯಿಗಳು ಸಕ್ಕರೆಯನ್ನ ಹೀರುತ್ತಾ ಕೂತಿದ್ವು .. ಈಗ ಯಾರಿಗೆ ಹೇಳೋದು..? ಡಬ್ಬದ ಮುಚ್ಚಳವನ್ನ ಸರ್ಯಾಗಿ ಹಾಕದಿರೋದಕ್ಕೆ ನನಗೆ ನಾನೇ ಬೈದುಕೊಂಡೆ..!!!

ವಿಷ್ಣು ಹೆಗಡೆ, ಕುಮಟಾ


Monday, November 21, 2011

ಸ್ನೇಹ ಅಂದ್ರೆ ಇದೇನಾ..?



ಈ ಬದುಕೆ ಹೀಗೆ..!? ಯಾರನ್ನೋ ಇಷ್ಟಪಡ್ತೀವಿ, ಯಾರ ಜೊತೆಗೋ ಬದುಕ್ತೀವಿ, ಬೇಡವಾದವರನ್ನ ನೆನಪು ಮಾಡ್ಕೋತ್ತೀವಿ, ಕೆಲವರನ್ನ ಮರೆತೀವಿ, ಇನ್ನೂ ಕೆಲವರನ್ನ ನೆನಪು ಮಾಡಿಕೊಂಡು ಕೊರಗ್ತೀವಿ.. ಫೈನಲ್ಲಾಗಿ ಯಾರಿಗೂ ಹೇಳದೆ, ಶಿವನಪಾದ ಸೇರ್ತೀವಿ.. ಏನ್ ಲೈಫ್ ರೀ ಇದು..? ಈ ರೀತಿ ಮೆಗಾ ಮೆಸೇಜೊಂದು ನಡುರಾತ್ರಿ ಸ್ನೇಹಿತನ ಮೊಬೈಲ್ನಿಂದ ಬಂದಿತ್ತು.. ಏನೋ ಲವ್ ಫೇಲ್ಯೂರ್ ಅಂತಾ ಸುಮ್ಮನಾಗಿಬಿಟ್ಟೆ..

ಜೀವನಾನುಭವ ತುಸು ವಿಭಿನ್ನವಷ್ಟೆ.. ಹಲವು ವರ್ಷಗಳ ಸ್ನೇಹ, ಪ್ರೀತಿ ಕಾರಣವನ್ನೇ ಹೇಳದೆ ನಮ್ಮನ್ನ ಬಿಟ್ಟಿ ಹೋಗುತ್ತವೆ.
ತಣ್ಣಗೆ ಮೌನವಾಗಿ ಕೊಲ್ಲುವ ಏಕಾಂಗಿ ಭಾವ ಮನಸ್ಸನ್ನ ಆವರಿಸಿಕೊಳ್ಳುತ್ತದೆ.. ತಂಬಾಕಿನ ಘಾಟು, ಮದ್ಯದ ಅಮಲು ನೋವಿಗೆ ದಿವ್ಯೌಷಧವಾಗುತ್ತದೆ.

ಕಟ್ಟಿಕೊಂಡಿದ್ದ ಕನಸು, ಆಸರೆಯಾಗಿದ್ದ ಪ್ರೀತಿ, ಹಿತವೆನಿಸಿದ ಮನೆಯ ವಾತಾವರಣ ಕೈತಪ್ಪಿ ಹೋದಾಗ ಮನಸ್ಸು ವೇದನೆಗೆ, ತಳಮಳಕ್ಕೆ  ಒಳಗಾಗೋದು ಸಹಜ.. ಇದು ಪ್ರಕೃತಿ ನಿಯಮ..! ಅಷ್ಟಕ್ಕೆ ಜೀವನೋತ್ಸಾಹ ಕಳೆದುಕೊಂಡು, " ಅಯ್ಯೋ, ಈ ಹಾಳಾದ ನೋವಿನಲ್ಲಿ ಬದುಕಬೇಕಲ್ಲಪ್ಪ" ಅಂದುಕೊಳ್ಳುವುದು ಎಷ್ಟು ಸರಿ..? ಜೀವನದಲ್ಲಿ ಆಶಾವಾದಿಯಾಗಿರಬೇಕು.. ಬಂದಿದ್ದನ್ನ ಸ್ವೀಕರಿಸಿ, ಗೆಲ್ಲಬೇಕು.. ಕಳೆದು ಹೋಗುವ ಪ್ರತಿಯೊಂದರ ಸಂಬಂಧ "ಮತ್ತೊಂದರ" ಪ್ರವೇಶದಿಂದ ನಿವಾರಣೆಯಾಗುತ್ತದೆ..!!!

ಇಷ್ಟೆಲ್ಲ ಬರೆಯುವುದಕ್ಕೂ ಕಾರಣ ಉಂಟು.. ಮೊನ್ನೆ ಮೊನ್ನೆ ನನ್ನ ಸ್ನೇಹಿತೆಯೊಬ್ಬಳು 'ನನಗೆ ಇನ್ನು ಕಾಲ್ ಮಾಡ್ಬೇಡ. ಮೆಸೇಜೂ ಮಾಡ್ಬೇಡ ಅಂದಳು.. ಕಾರಣ ಕೇಳಿದಾಗ ಬಂದ ಉತ್ತರ "ನನಗೆ ಮದುವೆ"... ಒಂದ್ ಕ್ಷಣ ಮನಸ್ಸು ಖಿನ್ನವಾಯ್ತು..

ಮೊನ್ನೆ ದಸರಾಗೆ ಊರಿಗೆ ಹೋಗಿದ್ದೆ.. ನಾನು ಮತ್ತೆ ಸ್ನೇಹಿತ ಸುಮ್ಮನೆ ಸುತ್ತಾಡ್ತಾ ಇದ್ದೆವು.. ಹಾಗೆ ನನ್ನ ಸ್ನೇಹಿತನ 'ಸ್ನೇಹಿತೆ' ಮಂದೆ ಪ್ರತ್ಯಕ್ಷಳಾಗಿ ಹಾಯ್ ಅಂದಳು.. ಇಬ್ಬರೂ ಹಾಯ್ ಅಂದೆವು.. ಅವಳ ಜೊತೆ ನನಗೆನೂ ಅಂತಾ ಸ್ನೇಹ ಇರ್ಲಿಲ್ಲ.. ಆದ್ರೆ, ನನ್ನ ಜೊತೆಗಿದ್ದ ಫ್ರೆಂಡ್ ಮತ್ತು ಆಕೆ ಇಬ್ಬರೂ ತುಂಬಾ ಕ್ಲೋಸ್.. ಸಹಾಯವನ್ನೂ ಮಾಡಿದ್ದ ಆ ನಿರ್ಭಾವುಕ ಜೀವಿಗೆ.. ಆದ್ರೆ, ಅವಳು " ಇದೇ ತಿಂಗಳು ನನ್ನ ಮದ್ವೆ ಬನ್ನಿ" ಅಂತಾ ಹೇಳಿ, ಆಮಂತ್ರಣ ಪತ್ರಿಕೆಯನ್ನ ಕೊಡದೆ, ಅಡ್ರೆಸ್ ಕೂಡ ಹೇಳದೆ, ದಿಢೀರ್ ಮಾಯವಾದಳು.. ನನ್ನ ಸ್ನೇಹಿತ ಮಾತ್ರ ತುಂಬಾ ಬೇಜಾರ್ ಆಗಿದ್ದ... ಕಸಿವಿಸಿಯೂ ಆಗಿತ್ತು ಅವನಿಗೆ.. ನಾವಿಬ್ಬರೂ ಹರಟೆಗೆ ಕೂತಾಗಲೆಲ್ಲಾ, ಅವಳ ವಿಷ್ಯವನ್ನೇ ಮಾತಾಡುತ್ತಿದ್ದ.. ಅವಳ ಗುಣಗಾನ ಮಾಡುತ್ತಿದ್ದ.. ಸಮಾಧಾನ ಹೇಳಿದೆ. ಎಲ್ಲರ ಜೀವನದಲ್ಲೂ ಇಂತದೊಂದು ಘಟನೆ ಇದ್ದೆ ಇರುತ್ತೆ..!!

ವಿಷ್ಣು ಹೆಗಡೆ, ಕುಮಟಾ


Friday, September 23, 2011

ನಿಜಾಮರನಾಡಲ್ಲಿ...

ಪುಟ್ಟ ಹಳ್ಳಿಯಿಂದ ಭವಿಷ್ಯ ಅರಸಿ, ಬಂದಿದ್ದು ಹೈದರಾಬಾದ್ಗೆ.. ಬಸ್ ನಿಗದಿತ ಸಮಯಕ್ಕಿಂತ ಒಂದೆರಡು ಗಂಟೆ ಲೇಟಾಗೇ ಎಮ್.ಜಿ  ಬಸ್ ಸ್ಟ್ಯಾಂಡ್ ತಲುಪಿತ್ತು.. ನನಗದು ಹೊಸ ಪ್ರಪಂಚ, ಹೊಸ ದಿನ, ನೂತನ ಅನುಭವ.. ಸುತ್ತ ಮುತ್ತಲಿನ ವಾತಾವರಣವನ್ನ ಕಂಡು ಒಂದೆರಡು ಕ್ಷಣದಲ್ಲೇ ನಿಜಾಮರ ನಾಡನ್ನ ಅರ್ಥಮಾಡಿಕೊಂಡೆ. ಒರಟು ಜನ, ಚರಂಡಿಯಿಂದ ಬರುತ್ತಿದ್ದ ದುರ್ವಾಸನೆಯನ್ನ ನೋಡಿ, ನಮ್ಮೂರೇ ಚೆಂದ ಅಂತಾ ಮನಸ್ಸು ಹೇಳ್ತಿತ್ತು. ಎಲ್ ನೋಡಿದ್ರು ಚಿತ್ರ ಮಂದಿರಗಳು, ಅಲ್ಲಿ ಸಿಹಿಗೆ ಮುತ್ತಿದ ಇರುವೆ ತರ ಇರೋ ಜನಜಂಗುಳಿಯನ್ನ ನೋಡಿ ದಂಗಾದೆ..


ಆಗ್ಲೆ ಸಮಯ 9 ಗಂಟೆ ಆಗಿತ್ತು. ಬಸ್ ಸ್ಟ್ಯಾಂಡ್ ಪಕ್ಕದಲ್ಲೇ ಇದ್ದ ಹೊಟೇಲ್ ನಲ್ಲಿ ಲಘು ಉಪಹಾರ ಸೇವಿಸಿ, ಒಂದು ಜ್ಯೂಸ್ ಕುಡಿದು,  ಅಡ್ರೆಸ್ ಕೇಳ್ಕೊಂಡು , ಮಧ್ಯಾಹ್ನದ ವೇಳೆಗೆ ರಾಮೋಜಿ ಫಿಲಂ ಸಿಟಿಗೆ ಬಂದೆ.. ಬಿಡು ಬಿಸಿಲಿನ ತಾಪಕ್ಕೆ ನಾನಾಗಲೇ ಬೆಂಡಾಗಿದ್ದೆ. ಕೆಂಪಾಗಿದ್ದೆ.. ಅಂತೂ ಅಲ್ಲಿ ಇಲ್ಲಿ ಅಲೆದು ಹೆಚ್.ಆರ್.ಭೇಟಿ ಮಾಡಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡೆ.. ಟೀವಿ ಚಾನಲ್ಗಳ ಸೊಬಗನ್ನ ಕಂಡು ಮನಸ್ಸಿನಲ್ಲೇ ಬೀಗಿದೆ.. ಒಂದ್ಕಡೆ ಕೆಲಸದ ಖುಷಿ.. ಇನ್ನೊಂದ್ ಕಡೆ ಹೊಸ ಜೀವನ, ಹೊಸ ಪ್ರದೇಶ, ವರ್ಕ್ ಹೇಗ್ ಇರುತ್ತೋ ಅನ್ನೋ ಭಯ..?


ನಾನು ಸಂಪ್ರದಾಯಸ್ಥ ವಾತಾವರಣದಿಂದ ಬಿಡುಗಡೆ ಬಯಸಿದ್ದೆ. ಸಾಂಸ್ಕೃತಿಕ ಪರಿಸರ, ಹಬ್ಬದ ಹಾಡು-ಕುಣಿತ, ಶ್ರಾವಣ ಮಾಸದ ಭಜನೆ ನನಗೆ ಇಷ್ಟವಾಗ್ತಿರ್ಲಿಲ್ಲ.. ( ಈಗ ಹಳ್ಳಿ ಸೊಗಡೆ ಇಷ್ಟ - ನಮ್ಮೂರೆ ಚೆಂದ ) ಹೀಗಾಗಿ ಸ್ವತಂತ್ರವಾಗಿ ಬದುಕಬೇಕೆನ್ನವ ನನ್ನ ಆಸೆಗೆ ರೆಕ್ಕೆಪುಕ್ಕ ಬಂದಿತ್ತು. ಉಂಡಾಡಿ ಗುಂಡನ ಹಾಗಿದ್ದ ನನಗೆ ಒಂದೆರಡು ದಿನದಲ್ಲೇ ಜೀವನ ಅರ್ಥವಾಗಿತ್ತು. ಬಂದ ದಿವಸದಿಂದ ಕಣ್ಣಿಗೆ ಬಿದ್ದಿದ್ದು, ಮನಸ್ಸಿನಲ್ಲಿ ಸೇರಿಹೋಗಿದ್ದು, ಹೃದಯ ಕಲುಕಿದ್ದು, ಚುಚ್ಚಿದ್ದು ನೂರಾರು ಚಿತ್ರಗಳು..!!!

ಹೈಕೋರ್ಟ್ ಕಾಲೋನಿಯಲ್ಲಿ ಕನ್ನಡ ಭವನವೆಂಬ ಹಿರಿಮೆ ಹೊಂದಿದ್ದ ಬಿಲ್ಡಿಂಗ್ನಲ್ಲಿ ವಾಸ.. ಅಲ್ಲಿಂದ ಆಫೀಸ್ಗೆ ಹದಿನೈದು ನಿಮಿಷದ ಹಾದಿ.. ಕಂಪನಿ ಬಸ್ ನಿಂದ ಪಿಕಪ್, ಡ್ರಾಪ್ ಇತ್ತು.. ಕೆಲಸಕ್ಕೆ ಹೋದ ಮೊದಲ ದಿನವೇ ಸುದ್ದಿ ಮಾಧ್ಯಮದ ತರ ತರ ದೃಶ್ಯಗಳನ್ನ ಕಂಡು ಬೆಪ್ಪಾದೆ.. ಮಂಕಾದೆ..

ರೂಮಿನಲ್ಲಿ ಕಳೆಯುತ್ತಿದ್ದ ದಿನಗಳು ಎಂದಿಗೂ ಮನಸ್ಸಿನಿಂದ ಮಾಸುವುದಿಲ್ಲ. ಒಬ್ಬನಿಗೆ ತಮಿಳು ಸಿನಿಮಾ ನೋಡೋ ಆಸೆ. ಇನ್ನೊಬ್ಬ ಸ್ನೇಹಿತನಿಗೆ ಡಬ್ಲ್ಯೂಡಬ್ಲ್ಯೂಎಫ್ ಹೆಚ್ಚು.. ಮತ್ತೊಬ್ಬನಿಗೆ ತೆಲುಗು ಮೋಹ.. ನನಗೆ ಕ್ರಿಕೆಟ್ ನೋಡೋ ಚಟ.. ಇರೋದು ಒಂದೇ ಟೀವಿ.. ಹೀಗಾಗಿ ಕಿತ್ತಾಡಿದ್ದು ಇದೆ..

ಹೈದರಾಬಾದ್ ನಮ್ಮ ಬೆಂಗಳೂರಿನ ತರ ಸುಂದರ ನಾಡಲ್ಲ.. ವ್ಯವಸ್ಥಿತವಾಗಿ ಕಟ್ಟಿದ ನಗರವಲ್ಲ.. ಅಡ್ಡಾತಿಡ್ಡಿಯಾಗಿ, ಬೇಕಾಬಿಟ್ಟಿಯಾಗಿ ಬೆಳೆದಿದೆ. ಓಲ್ಡ್ ಸಿಟಿ , ನ್ಯೂಸಿಟಿ ಅನ್ನೋ ಎರಡು ಕಂದಕಗಳಿವೆ.. ಎಲ್ಲೂ ಟ್ರಾಫಿಕ್ ರೂಲ್ಸ್ ಗೆ  ಬೆಲೆನೇ ಇಲ್ಲ.. ಆದ್ರೂ, ಒಂದಿಷ್ಟು ಪ್ರವಾಸಿ ತಾಣಗಳು ಮನಸ್ಸನ್ನ ರಂಜಿಸೋದು ಸುಳ್ಳಲ್ಲ..

ರಾಮೋಜಿ ಫಿಲಂ ಸಿಟಿ, ಗೋಲ್ಕೋಂಡ, ಚಾರ್ಮೀನಾರ್, ಹುಸೇನ್ ಸಾಗರ್, ಲುಂಬಿನಿ ಗಾರ್ಡನ್ ಬಿಟ್ರೆ ಬೇರೇನೂ ಅಷ್ಟೇನೂ ಸುಂದರವಾಗಿಲ್ಲ. ಸೋಗಸಾಗಿಲ್ಲ. ನಗರದಲ್ಲಿ ಎಲ್ ನೋಡಿದ್ರೂ ಗಲೀಜು, ಕಿರಿಕಿರಿ ಹುಟ್ಟಿಸೋ ಕಿರಿದಾದ ರಸ್ತೆಗಳು, ನಗರದ ಮಧ್ಯಭಾಗದಲ್ಲಿದ್ದು ದುರ್ವಾಸನೆ ಪಸರಿಸುತ್ತಿರೋ ನದಿ.. ಇದನ್ನೆಲ್ಲ ನೋಡಿದ್ರೆ, ಇದು ಯಾವ್ ಸೀಮೆ ಊರು ಅನಿಸುತ್ತೆ.. ಮೂರುವರೆ ವರ್ಷದಲ್ಲಿ ಒಂದ್ ಒಳ್ಳೆ ಹುಡುಗಿಯೂ ನೋಡ್ಲಿಕ್ಕೆ ಸಿಕ್ಕಿಲ್ಲ.. ಈ ವಿಷಯದಲ್ಲಿ ಬೆಂಗಳೂರು ಬೆಸ್ಟ್.. ಫಸ್ಟ್..!!!

ಹೈದರಾಬಾದ್ ನಲ್ಲಿ  ಕಳೆದ ಮೂರುವರೆವರ್ಷಗಳು ನನಗೆ ಜೀವನಪಾಠ ಕಲಿಸಿದ್ದು ಸುಳ್ಳಲ್ಲ.. ಬದುಕನ್ನ, ಜನರನ್ನ ಅರ್ಥಮಾಡಿಕೊಂಡಿದ್ದು  ಅಲ್ಲೆ. ಅಲ್ಲಿಗೆ ಹೋಗುವಾಗ ಬೇಜವಾಬ್ದಾರಿ ವ್ಯಕ್ತಿಯಾಗಿದ್ದೆ.. ಸಮಯಪಾಲನೆ ಅನ್ನೊ ಪದನೇ ಗೊತ್ತಿರ್ಲಿಲ್ಲ.. ಈಗ ಹಾಗಿಲ್ಲ, ಎಲ್ಲವೂ ಅರ್ಥವಾಗಿದೆ.. ಹೀಗಾಗಿ ಆ ಊರು ನನಗೆ ಶಾಲೆಯಂತೆ.. ಅಲ್ಲಿನ ಜನರು, ಮೇಷ್ಟ್ರು..!!!


ವಿಷ್ಣು ಹೆಗಡೆ, ಕುಮಟಾ

Monday, September 19, 2011

ಸಹಾಯಕ್ಕಾಗಿ ಬೆತ್ತಲೆ.!!!



ಇದೆಲ್ಲ ಪುಕ್ಕಟ್ಟೆ ಪ್ರಚಾರಕ್ಕಾಗಿ..  ಟೀಂ ಇಂಡಿಯಾ ಗೆದ್ದರೆ ಬಟ್ಟೆಬಿಚ್ತಿನಿ ಅಂತಾ ಹೇಳಿ ದಿನಬೆಳ್ಗಾಗೊದ್ರೆಳ್ಗೆ ಸ್ಟಾರ್ ಪಟ್ಟಕ್ಕೇರಿದ್ದಳು ಮಾಡೆಲ್  ಪೂನಂ ಪಾಂಡೆ.. ಪೂನಂ ಕ್ರೀಡಾಸ್ಫೂರ್ತಿ ನೋಡಿ ದಂಗಾದ ಪಾಕ್ ಮಾಡೆಲ್ ವೀಣಾ ಮಲ್ಲಿಕ್, ಸೋಲಿನಿಂದ ಕಳೆಗುಂದಿರೋ ಪಾಕ್ ತಂಡಕ್ಕೆ ಜೀವತುಂಬಲು ಅರೆಬೆತ್ತಲಾಗ್ತಿನಿ ಅಂತಾ ಚಮಕ್ ಕೊಟ್ಟಿದ್ದಳು.. ಈಗ ಮಾಡೆಲ್ ಡಿಜೆ ಜೆನ್ನಿ ಸರದಿ..

ಬಡ ಹಾಕಿ ಆಟಗಾರರಿಗೆ ಆರ್ಥಿಕ ಸಹಾಯ ನೀಡಲು ಜೆನ್ನಿ ಬೆತ್ತಲಾಗ್ತಿದ್ದಾಳೆ..!!! ಈಗಾಗ್ಲೆ ಫೋಟೋಶೂಟ್ ಮುಗ್ದಿದೆ.. ಬಿಸಿಬಿಸಿ ಚಿತ್ರಗಳನ್ನ ಹರಾಜ್ ಹಾಕೋದ್ ಒಂದೇ ಬಾಕಿ.. ಹಜಾಜಿನಿಂದ ಸಂಗ್ರಹವಾಗೋ ಹಣವನ್ನ ಆಟಗಾರರಿಗೆ ಕೊಡ್ತಾಳಂತೆ. ಪುರುಷರ ಮ್ಯಾಗ್ಜಿನ್ ಒಂದು ಹಾಟ್ ಚಿತ್ರಗಳನ್ನ ಕೊಂಡ್ಕೊಂಡ್ ಬಿಸಿಬಿಸಿ ದೋಸೆಯಂತೆ ಸೇಲ್ ಮಾಡ್ಲಿಕ್ಕೆ ಲೆಕ್ಕಾಚಾರ ಹಾಕಿದೆ.. ಜೆನ್ನಿಗೆ 10ಲಕ್ಷ ಮುಂಗಡ ಹಣವನ್ನೂ ಕೊಟ್ಟಿದೆ..

ಏಷ್ಯನ್ ಟ್ರೋಫಿ ಗೆದ್ದ ಹಾಕಿ ಆಟಗಾರಿಗೆ ಪುಡಿಗಾಸು ಕೊಟ್ಟಿದ್ದು ಸರಿಯಲ್ಲ. ಕ್ರಿಕೆಟ್ ಆಟಗಾರರಿಗೆ ಕೋಟಿ ಕೋಟಿ ಕೋಡೋದು ಯಾವ್ ನ್ಯಾಯ ಅಂತೆಲ್ಲಾ ಮೈಮೇಲೆ ಬಂದೋವ್ರತರ ಆಡ್ತಿದ್ದಾಳೆ.. ಇಷ್ಟು ದಿನ ಸುಮ್ಮನಿದ್ದ ಜೆನ್ನಿ, ಇದ್ದಕ್ಕಿದ್ದಂತೆ ಹಾಕಿ ಸ್ಟಿಕ್ ಹಿಡ್ಕೊಂಡು ಗ್ರೌಂಡ್ಗೆ ಬರ್ಲಿಕ್ಕೆ ಕಾರಣ ಏನು..? ಸಹಾಯ ಮಾಡ್ಲಿಕ್ಕೆ ಬೆತ್ತಲೆನೇ ಆಗ್ಬೇಕಾ..? ಇದೆಲ್ಲ ಪ್ರಚಾರಕ್ಕಾಗಿ ಅನ್ನೋದು ಎಂಥಾ ದಡ್ಡನಿಗಾದ್ರು ಗೊತ್ತಾಗುತ್ತೆ.

ಒಂದೇ ಕಲ್ಲಿಗೆ ಎರಡ್ ಹಕ್ಕಿ ಹೊಡ್ದಿದ್ದಾಳೆ ಜೆನ್ನಿ. ಸಹಾಯದ ನೆಪದಲ್ಲಿ ಬೆತ್ತಲೆನಾಟಕ ಆಡಿ, ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾಳೆ.. ಒಂದ್ ಅರ್ಥದಲ್ಲಿ ಪೂನಂಗಿಂತ ಜೆನ್ನಿ ಬುದ್ಧಿವಂತೆ ಅಲ್ವಾ. ???

ವಿಷ್ಣು ಹೆಗಡೆ, ಕುಮಟಾ


Sunday, September 18, 2011

ಹುಡುಗರ ಲೈಫು ಇಷ್ಟೇನೆ...!!!



ಬಾಲ್ಯ, ಪ್ರೌಢ, ಯವ್ವನದ ಗೊಂದಲಗಳು, ತುಮುಲಗಳು, ಆಕರ್ಷಣೆಗಳು, ತಾತ್ಸಾರಗಳು, ಪ್ರೀತಿಗಳು.. ಅಪರಾತಪರಾ ಮನಸ್ಥಿತಿಗಳು.. ಯುವಕರ ಲೈಫು ಇಷ್ಟೇನೆ..!!!
ಬದುಕು, ಪ್ರೀತಿ, ಕೆಲಸ ಕುರಿತು ಯುವಕರ ಅಸಡ್ಡೆ, ಉಡಾಫೆಯನ್ನ "ಲೈಫು ಇಷ್ಟೇನೆ" ಸಿನಿಮಾದಲ್ಲಿ ಯೋಗರಾಜ್ ಭಟ್ಟರು ವಿಡಂಬನೆಯಾಗಿ ಕಟ್ಟಿಕೊಟ್ಟಿದ್ದು ಸುಳ್ಳಲ್ಲ..

ಬೆಂಗಳೂರಿನಲ್ಲಿರೋ ಫೋರಂ, ಪಿವಿಆರ್, ಮಾಲ್ಗಳಿಗೆ ಹೋದ್ರೆ ಸಾಕು ಯುವಕರ ಲೈಫು ಇಷ್ಟೇನೆ ಅಂತಾ ಗೊತ್ತಾಗ್ ಬಿಡುತ್ತೆ..

ಕಾದು ಕಾದು ಬಳಲಿ, ಬೆಂಡಾದ ಮೇಲೆ ಬಳಕುತ್ತಾ ಬರ್ತಾಳೆ ಹುಡುಗಿ.. ಅವನಿಗೋ ಅಮೃತವನ್ನೇ ಸವಿದ ರುಚಿ.! ಅವಳನ್ನ ಕಂಡ್ ಕೂಡ್ಲೆ ಹಾಯ್ ಹೇಳಿ, ಇಬ್ಬರೂ ಅಂಟಿಕೊಂಡೆ ಒಳಗಡೆ ಹೋಗ್ತಾರೆ.. ಮೊದ್ಲು ಐಸ್ ಕ್ರೀಮ್, ಆಮೇಲೆ ಶಾಪಿಂಗ್, ನಂತ್ರ ಸಿನಿಮಾ. ಹುಡ್ಗಿ ಪೋಸ್ಟರ್ ನೋಡ್ತಾ ಇದ್ರೆ, ಹುಡ್ಗ ಕ್ಯೂನಲ್ಲಿ ನಿಂತು ಟಿಕೆಟ್
ತೆಗೆದುಕೊಳ್ತಾನೆ.. ಹಿಂದಿನ ಸಾಲಿನಲ್ಲಿ ಕೂತು ಗುಸು ಗುಸು, ಪಿಸು ಪಿಸು ಅಂತಾ ಸಿನಿಮಾ ನೋಡೋ ಟೈಮ್ನಲ್ಲಿ ಹುಡ್ಗಿ ಕೊಟ್ಟ ಎರಡ್ ಚಮಕ್ಗೆ ಇಂಗ್ ತಿಂದ್ ಮಂಗನಂತಾದ ಹುಡ್ಗನಿಂದ ಹೊರ್ಗೆ ಬಂದಿದ್ದೆ ತಂಡ, ಮತ್ತೆರಡು ಐಸ್ ಕ್ರೀಮ್
ಬೋನಸ್... ಮೂರ್ ತಾಸ್ ಆಗೋದ್ರೆಳ್ಗೆ ಮೂರು ಸಾವಿರ ಉಡೀಸ್... ಫೋರಂ,ಪಿವಿಆರ್ , ಮಾಲ್ಗಳಲ್ಲಿ ಲೈಫು ಇಷ್ಟೇನೆ..!!!!








ಇದು ಸುಮ್ನೆ ಬರೆದಿದ್ದಲ್ಲ.. ಒಮ್ಮೆ ನನ್ನ ಸ್ನೇಹಿತ, ಬೆಸ್ಟ್ ಫ್ರೆಂಡ್ ( ಹುಡುಗಿ) ಕರ್ಕೊಂಡು ಪಿವಿಆರ್ ಸಿನಿಮಾಕ್ಕೆ ಹೋಗಿದ್ದಾಗ ನಡೆದ ಘಟನೆ ಇದು.. ಮೊನ್ನೆ ಲೈಫು ಇಷ್ಟೇನೆ ಸಿನಿಮಾಕ್ಕೆ ಹೋದಾಗ ಹೇಳ್ದ.. ನಾನಂತೂ ಸಿಕ್ಕಾಪಟ್ಟೆ ನಕ್ಕೆ..!!!

ಬೆಂಗಳೂರಿನಲ್ಲಿ ಹುಡುಗರ ಲೈಫು ಇಷ್ಟೇನೆ...!!!!!!!!

ವಿಷ್ಣು ಹೆಗಡೆ, ಕುಮಟಾ

Saturday, September 17, 2011

ಚಿತ್ರಬರಹ


ಊಟಕ್ಕಾಗಿ...















ಅಪಾಯಕಾರಿ ಕೆಲಸ

 















ಅಮ್ಮಾ..! ಗುಲಾಬಿ ಬೇಕಾ..?















ಇಲ್ಲಿ ಏನಾದ್ರೂ ಸಿಗುತ್ತಾ.???






















ತಮಾಷೆಗಾಗಿ..!



ಟೀವಿ ಚಾನಲ್ಗಳಲ್ಲಿ ಹಗಲು, ರಾತ್ರಿ ಎರಡೂ ಒಂದೇ
ಭಾನುವಾರ ಬಂದ್ರೆ ಸಾಕು,
ಎಲ್ಲರೂ ನೊಟೀಸ್ ಬೋರ್ಡ್ ಮುಂದೆ
ಶಿಫ್ಟ್ ನೋಡ್ಲಿಕ್ಕೆ ತಾ ಮುಂದೆ, ತಾ ಮುಂದೆ,
ನಾ ಮಾತ್ರ ಹಿಂದೆ, ಹಿಂದೆ.!!!


ಬ್ರೇಕಿಂಗ್ ಬಂತ್ ಅಂದ್ರೆ ತಿಂಡಿಯಿಲ್ಲ, ಊಟ ಇಲ್ಲ
ಎಲ್ರಿಗೂ ಲೈವೇ ಎಲ್ಲಾ
ನನಗೆ ಮಾತ್ರ ಅಂತಾ ಹಂಗಿಲ್ಲ.
ಯಾಕಂದ್ರೆ ನನಗೂ, ಅದ್ಕೂ ಸಂಬಂಧನೇ ಇಲ್ಲ.!!!
ವಿಷ್ಣು ಹೆಗಡೆ, ಕುಮಟಾ


ಸವಿ ಸವಿ ನೆನಪು..!







ಕಣ್ಣಾಮುಚ್ಚೆ
ಕಾಡೆಗೊಡೆ
ಉದ್ದಿನ ಮೂಟೆ
ಉರುಳೇಹೋಯ್ತು....!!!!

ರಸ್ತೆಯಲ್ಲಿ ಹೋಗುವಾಗ, ಪುಟ್ಟ ಮಕ್ಕಳು ಕಣ್ಣಾಮುಚ್ಚಾಲೆ ಆಡ್ತಿದ್ದನ್ನ ಕಂಡು ನಾನು ಬಾಲ್ಯದ ದಿನಗಳನ್ನ ನೆನೆಸಿಕೊಂಡೆ..

ಆ ನೆನಪುಗಳೇ ಮಧುರ. ಸುಂದರ.. ಕಳೆದುಹೋದ ದಿನಗಳನ್ನ ಸ್ಮರಿಸಿಕೊಂಡ್ರೆ, ರೋಮಾಂಚನ.. ಕೀಟಲೆ , ತಂಟೆ, ಜಗಳ, ಹೊಡೆದಾಟ, ಹೀಗೆ... ಒಂದಾ, ಎರಡಾ..! ಕೊನೆಯಲ್ಲಿ ಕೈಯಲ್ಲಿ ಆಗದಿದ್ದಾಗ ಅಳುವುದು..

ಬಯ್ಯೊ  ಟೀಚರ್, ಹೊಡೆಯೊ ಮೇಟ್ರು, ಬೇಜಾರಾದಾಗ ಕಾಡುಗುಡ್ಡಗಳ ಒಬ್ಬಂಟಿ ಅಲೆದಾಟ, ಸ್ನೇಹಿತನ ಮುನಿಸು, ತರಲೆ... ಅಬ್ಬಾ..! ನೆನಪುಗಳ ಜಾತ್ರೆಯೇ ತೆರೆದುಕೊಳ್ಳುತ್ತೆ.

ಮನೆಯಲ್ಲಿ ತಂದೆ, ತಾಯಿ ಬೈಯ್ತಿರಲಿಲ್ಲ.. ಪ್ರೀತಿಯಿಂದ ನೋಡಿಕೊಳ್ತಿದ್ರು.. ನನ್ಗೆ ಏನಾದ್ರು ಮೇಟ್ರು ಬೈದ್ರೆ, ಅಜ್ಜ ನೇರವಾಗಿ ಶಾಲೆಗೆ ಹೋಗಿ ರಂಪಾಟ ಮಾಡಿದ್ದು ಇದೆ.. ಕೇಳಿದಾಗಲೆಲ್ಲಾ ಕಷ್ಟವಾದ್ರೂ, ಅಪ್ಪ ಪ್ರೀತಿಯಿಂದ ಹಣ ಕೊಡ್ತಿದ್ದ. ನನಗೋ ಕಂಡಿದ್ದನ್ನೇಲ್ಲ ತಿನ್ನೋ ಆಸೆ.. ಅಂಗಡಿಯಲ್ಲಿ ಏನೇ ಹೊಸದು ಬಂದ್ರು, ತಿನ್ನೋ ಚಪಲ.. ಕೊಟ್ಟ ದುಡ್ಡನ್ನ ತಿನ್ನೊದಕ್ಕೆ ಕಾಲಿ ಮಾಡುತ್ತಿದ್ದೆ.. ನಯಾ ಪೈಸೆಯನ್ನ ನಾಳೆಗಾಗಿ ಇಟ್ಟುಕೊಳ್ತಿರ್ಲಿಲ್ಲ.. ಇಂದಿಗೂ ಅಷ್ಟೆ, ನಾಳೆಗಾಗಿ ಏನನ್ನೂ ಕೂಡಿಡದ ನಿಶ್ಚಿಂತೆಯ ಮನುಷ್ಯ ನಾನು..

ಶಾಲೆಗೆ ಹೋಗುವಾಗ ಬ್ಯಾಗ್ನಲ್ಲಿ ಆಟದ ವಸ್ತುಗಳೇ ಇರ್ತಿದ್ವು.. ಟೀಚರ್ ಇದನ್ನೆಲ್ಲ ಸುರಿದು ಎರಡೇಟು ಕೊಟ್ಟಿದ್ದು ಇದೆ.. ಮನೆಗೆ ಕಂಪ್ಲೇಂಟ್ ಮಾಡಿದ್ರು ನಾನ್ ನನ್ನ ಬುದ್ಧಿಯನ್ನ ಬಿಟ್ಟಿರ್ಲಿಲ್ಲ.

ಆದ್ರೆ, ಶಾಲೆಯಲ್ಲಿ ಶಾರದಾ ಪೂಜೆ, ಸ್ವಾತಂತ್ರ್ಯೋತ್ಸವ ಬಂದ್ರೆ, ಅಲಂಕಾರಕ್ಕಾಗಿ ಮೇಟ್ರಿಗೆ ನಾನೇ ಬೇಕಿತ್ತು.. ಆ ಸಮಯದಲ್ಲಿ ಟೀಚರ್ ನನ್ಗೆ ಬೆಣ್ಣೆ ಸವರಿ ಕೆಲಸ ಮಾಡ್ಸ್ಕೊಳ್ತಿದ್ರು.. ಮತ್ತೆ ಒಂದೆರಡು ದಿನ ಕಳೆದ ಮೇಲೆ ಬೆತ್ತದ ಏಟಿನ ರುಚಿ ಇದ್ದಿದ್ದೆ..

ರಜಾ ಸಿಕ್ರೆ ಸಾಕು ನನ್ನ ಪುಟ್ಟ ತಂಗಿಯ ಜೊತೆ ಆಟ ಆಡ್ತಿದ್ದೆ. ಕ್ರಿಕೆಟ್, ಚನ್ನೆಮಣೆ, ಕಳ್ಳಾ ಪೊಲೀಸ್ ಆಟ, ಲಗೋರಿ ಆಡಿದ್ದನ್ನ ನೆನೆಸಿಕೊಂಡ್ರೆ ಏನೋ ಒಂದ್ ರೀತಿ ಖುಷಿಯಾಗುತ್ತೆ.. ಯಾವುದೇ ಚರ್ಚಿಲ್ಲದೇ ಸಂತೋಷ ಸಿಗುತ್ತಿತ್ತು.. ಬಾಲ್ಯ ಎಷ್ಟು ಸಂದರ ಅಲ್ವಾ..?

ಈಗ ಎಲ್ಲಾ ಉಲ್ಟಾ-ಪಲ್ಟಾ.. ಕಾಲ ಬದ್ಲಾಗಿದೆ.. ಜೇಬಿಲ್ಲಿರುತ್ತಿದ್ದ ಚಿಲ್ಲರೆ ಕಾಸುಗಳ ಜಾಗದಲ್ಲಿ ಗರಿಗರಿ ಐದನೂರರ ನೋಟುಗಳು ಬಂದಿವೆ. ಸೈಕಲ್ ಬದ್ಲು ಬೈಕ್, ಐಷಾರಾಮಿ ಕಾರುಗಳು..  ಹಾಗೆನೇ ಮುಗ್ಧತೆಯೂ ಮನಸ್ಸಿನಿಂದಹೊರಟು ಹೋಗಿದೆ.. ಈಗೆನಿದ್ದರೂ ಕೃತಕ ಸಂತೋಷ.. ಒಲ್ಲದ ಮನಸ್ಸಿನ ನಗೆ.

ಇದನ್ನೆಲ್ಲ ನೆನಸಿಕೊಂಡ್ರೆ ಮತ್ತೆ ಬರಬಾರದೇ ಬಾಲ್ಯದ ದಿನಗಳು ಅನಿಸುತಿದೆ..


ವಿಷ್ಣು ಹೆಗಡೆ, ಕುಮಟಾ