ಯುವಕರ ಮೇಲೆ ನಿರೀಕ್ಷೆಯಿತ್ತು.. ಹಿರಿಯರ ಮೇಲೆ ವಿಶ್ವಾಸವಿತ್ತು.. ಅದೃಷ್ಟದ ನಾಯಕ ಗೆಲುವಿನ ನಾವಿಕನಾಗುತ್ತಾನೆ ಅನ್ನೊ ನಂಬಿಕೆಯಿತ್ತು.. ಆದ್ರೆ, ಆ ನಂಬಿಕೆ ಹುಸಿಯಾಗಿದೆ. ಗೆಲುವಿನ ಕನಸುಗಳೊಂದಿಗೆ ಹೋದವರಿಗೆ ಸಿಕ್ಕಿದ್ದು ಬ್ಯಾಕ್ ಟು ಬ್ಯಾಕ್ ಸೋಲು. ಹೋಗುವಾಗ ಹೀರೊಗಳಾಗಿದ್ದವರು ಈಗ ಜೀರೊಗಳಾಗಿದ್ದಾರೆ.
ವಿದೇಶದಲ್ಲಿ ವಿಶೇಷವಾಗಿ ಸೋಲುವುದು ಟೀಮ್ ಇಂಡಿಯಾಕ್ಕೆ ಹೊಸದೆನಲ್ಲ.. ಅದ್ರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಸಾಧನೆ ಕಳಪೆ. ದೇಶಿಯ ನೆಲದಲ್ಲಿ ಎದುರಾಳಿಗಳ ಮೇಲೆ ಮುಗಿಬೀಳುವ ಹುಲಿಗಳು ಬಿಳಿಯರ ನೆಲದಲ್ಲಿ ಕಾಗದದ ಮೇಲಿನ ಹುಲಿಯೇ. ವಿದೇಶಿ ನೆಲಕ್ಕೆ ಕಾಲಿಟ್ಟ ಕೂಡಲೇ ಆಟಗಾರರ ಪೌರುಷಗಳು ಮಾಯವಾಗುತ್ತೆ. ತಂಡದ ಸಾಮರ್ಥ್ಯ ಕುಗ್ಗುತ್ತೆ. ಹೀನಾಯವಾಗಿ ಸೋಲುತ್ತೆ ತಂಡ.. ಈ ಹಿಸ್ಟರಿ ಈಗ ಆಸ್ಟ್ರೇಲಿಯಾ ಟೂರ್ನಲ್ಲಿ ರಿಪೀಟ್ ಆಗಿದೆ. 64 ವರ್ಷಗಳ ಇತಿಹಾಸದಲ್ಲಿ ಕಾಂಗರೂ ನಾಡಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು ಐದೇ ಬಾರಿ..! ವಿದೇಶದಲ್ಲಿ ಟೀಮ್ ಇಂಡಿಯಾ ಸಾಧನೆಗೆ ಇದೇ ಕೈಗನ್ನಡಿ.
ಈ ಬಾರಿಯ ಆಸಿಸ್ ಟೂರ್ನಿಯಲ್ಲಂತೂ ಹಿರಿಯ ಬಿಗ್ ಬಾಸ್ ಗಳದ್ದು ತೀರಾ ಕಳೆಪೆಯಾಟ.. ದ್ರಾವಿಡ್ ಕವರ್ ಡ್ರೈವ್ ಸೊಬಗು ಸಂಪೂರ್ಣ ಮರೆಯಾದಂತಿತ್ತು.. ಏಳು ಇನ್ನಿಂಗ್ಸ್ ಗಳಲ್ಲಿ ಆರರಲ್ಲಿ ಬೋಲ್ಡ್..! ಇಂತಾ ಮಹಾನ್ ಆಟಗಾರನೊಬ್ಬ ಈ ರೀತಿ ಔಟಾಗಿದ್ದು ಅಚ್ಚರಿಯೇ. ಆಸ್ಟ್ರೇಲಿಯನ್ನರ ದಾಳಿಗೆ 'ಮಹಾಗೋಡೆ' ಛಿದ್ರ ಛಿದ್ರವಾಗಿದ್ದು ಸುಳ್ಳಲ್ಲ..
ಕಾಂಗರೂ ನಾಡಿಗೆ ಕಾಲಿಟ್ಟಿದ್ದೆ ತಡ ಕಲಾತ್ಮಕ ಆಟಗಾರ ಲಕ್ಷ್ಮಣ್ ಕಲೆಗಾರಿಕೆ ಕೂಡಾ ಕಾಣೆಯಾಗಿದೆ.. ಆಪತ್ಪಾಂಧವ ಆಪತ್ತಿಗೆ ಆಗಲೇ ಇಲ್ಲ. 8 ಇನ್ನಿಂಗ್ಸ್ ಗಳಿಂದ ಲಕ್ಷ್ಮಣ್ ಕಲೆಹಾಕಿದ್ದು 155ರನ್.. ಕಷ್ಟದಲ್ಲಿದ್ದ ತಂಡಕ್ಕೆ ಕ್ರಿಕೆಟ್ ದೇವರೂ ನೆರವಿಗೆ ಬರಲಿಲ್ಲ.. 8-9 ತಿಂಗಳಿಂದ ಮಹಾಶತಕದ ಬರ ಎದುರಿಸುತ್ತಿರೊ ಸಚಿನ್, ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಬಲ ಪ್ರದರ್ಶಿಸಲೇ ಇಲ್ಲ.
ಈಗ ಸರಣಿ ಸೋಲಿನ ಬಳಿಕ ಹಿರಿಯರ ತಲೆದಂಡದ ಮಾತುಗಳು ಕೇಳಿಬರುತ್ತಿವೆ. ಆಯ್ಕೆದಾರರು ಅಸ್ತ್ರ ಪ್ರಯೋಗಿಸಿದರೂ ಅಚ್ಚರಿಯಿಲ್ಲ.. ಹಾಗೆನಾದ್ರು ಆದಲ್ಲಿ ಮೊದಲು ಔಟ್ ಆಗೋದು ವಿವಿಎಸ್ ಲಕ್ಷ್ಮಣ್.. ಆದ್ರೀಗ, ದ್ರಾವಿಡ್ ತಾವಾಗಿಯೇ ನಿವೃತ್ತಿಯಾಗುತ್ತಾರೆ ಅನ್ನೊ ರೂಮರ್ ಹರಿದಾಡುತ್ತಿದೆ.. ಈ ಗಾಳಿಸುದ್ದಿ ಹುಸಿಯಾಗಿರಲಿ ಅಂತಾ ಆಶಿಸೋಣ.. ಯಾಕಂದ್ರೆ, ವಿಶ್ವಶ್ರೇಷ್ಠ ಆಟಗಾರನ ಬಲ ಇನ್ನೂ ಕುಗ್ಗಿಲ್ಲ.. ವಿಂಡೀಸ್, ಇಂಗ್ಲೆಂಡ್ ಟೂರ್ನಿಯಲ್ಲಿ ತಂಡದ ನೆರವಿಗೆ ಬಂದಿದ್ದು ಇದೆ ದ್ರಾವಿಡ್.. ಈ ಸತ್ಯವನ್ನ ಇಷ್ಟು ಬೇಗ ಮರೆತರೆ ಹೇಗೆ..? ದಾಖಲೆ ಪುಟ ತೆರೆದ್ರೆ ಇದು ಅರ್ಥವಾಗುತ್ತೆ. ಕೇವಲ ಒಂದು ಟೂರ್ನಿಯ ಡಾಟಾ ಇಟ್ಟುಕೊಂಡು, ಒಬ್ಬ ಆಟಗಾರನ ಸಾಧನೆ ಅಳೆಯೋದು ಎಷ್ಟು ಸರಿ..? ಹಾಗಾದ್ರೆ, ಆಸಿಸ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ಎಲ್ಲಾ ಆಟಗಾರರಿಗೆ ಇದೇ ಫಾರ್ಮುಲಾ ಅನ್ವಯವಾಗಬೇಕಲ್ಲವೆ..? ಆದ್ರೆ, ಒಬ್ಬನ ತೆಲೆದಂಡ ಕೇಳೋದು ಯಾವ ನ್ಯಾಯ..??
ವಿಷ್ಣು ಹೆಗಡೆ, ಕುಮಟಾ
