Wednesday, December 19, 2012

ದೊಡ್ಡಣ್ಣನ ನಾಡಿನ 'ಹಿರಿಯಣ್ಣ'




ಅಮೆರಿಕಾದ ಕಂಪೆನಿಗಳು ಬರ್ತಿವೆಯಂತೆ. ನಮಗಿನ್ನು ಎಲ್ಲಿ ಉಳಿಗಾಲ.? ಚಿಂತೆ ಶರುವಾಗಿದೆ, ಮುಂದೆನು ಅಂತಾ? ಗೊತ್ತಿರೋದು ಇದೊಂದೆ ಕಸುಬು. ಹೀಗೆ.. ಒಂದೆಸಮನೆ ಮನಸ್ಸಿನ ಆತಂಕಗಳನ್ನ ಹೊರಹಾಕುತ್ತಲೇ ಇದ್ದ, ಕಿರಾಣಿ ಅಂಗಡಿಯಾತ. ಇದು ಆತನೊಬ್ಬನ ಆತಂಕ ಅಲ್ಲ. ಇಡೀ ಕಿರಾಣಿ ಸಮುದಾಯದ ಅಳಲು. ಧ್ವನಿ. ಇದೆಲ್ಲ ಆತಂಕಕ್ಕೆ ಕಾರಣವಾಗಿದ್ದು ಚಿಲ್ಲರೆ ಕ್ಷೇತ್ರದಲ್ಲಿ ಶೇಕಡಾ 51 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಕೊಟ್ಟ ಅನುಮತಿಯಿಂದ. ಇದರಿಂದಾಗಿ ವಾಲ್ ಮಾರ್ಟ್ ನಂತಹ ವಿದೇಶಿ ರಿಟೇಲ್ ಕಂಪೆನಿಗಳು ಭಾರತಕ್ಕೆ ಬರಲು  ಹೆಬ್ಬಾಗಿಲು ತೆರೆದಂತಾಗಿದೆ.

ಅಮೆರಿಕಾ ಜಗತ್ತಿಗೆ ಹಿರಿಯಣ್ಣ ಆದ್ರೆ, ವಾಲ್ ಮಾರ್ಟ್ ರಿಟೇಲ್ ಕ್ಷೇತ್ರಕ್ಕೆ ದೊಡ್ಡಣ್ಣ. ವಿಶ್ವದೆಲ್ಲೆಡೆ ಚಿಲ್ಲರೆ ಕ್ಷೇತ್ರದಲ್ಲಿ ಕಬಂದ ಬಾಹು ಚಾಚಿದ ದೈತ್ಯ ಸಂಸ್ಥೆ. ಇದರ ವಾರ್ಷಿಕ ಆದಾಯ 420 ಬಿಲಿಯನ್ ಅಮೆರಿಕನ್ ಡಾಲರ್. 15 ದೇಶಗಲ್ಲಿ 8500 ಕ್ಕೂ ಹೆಚ್ಚು ಮಳಿಗೆಗಳಿದ್ದು 2 ಕೋಟಿಗೂ ಅಧಿಕ ಕಾರ್ಮಿಕರಿದ್ದಾರೆ.. ಇನ್ನೊಂದೆರಡು ವರ್ಷಗಳಲ್ಲಿ ಈ ದೈತ್ಯ ಕಂಪೆನಿ ನಗರದೆಲ್ಲೆಡೆ ತಮ್ಮ ಮಳಿಗೆಗಳನ್ನ ತೆರೆಯಲಿವೆ..  ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ.? ಹೀಗೆ ಪರ, ವಿರೋಧ ವಾದ ಶುರುವಾಗಿದೆ..

ಭಾರತಲ್ಲಿ ಕೃಷಿ ಕ್ಷೇತ್ರಬಿಟ್ಟರೆ, ಅತಿಹೆಚ್ಚು ಅಸಂಘಟಿತ ಕಾರ್ಮಿಕರಿರೋದು ಚಿಲ್ಲರೆ ಕ್ಷೇತ್ರದಲ್ಲೆ.. ಈ ಕ್ಷೇತ್ರದಲ್ಲಿ ವಾಲ್ ಮಾರ್ಟ್ ನಂತಹ ದೈತ್ಯ ಕಂಪೆನಿಗಳು ಸುಂಟರಗಾಳಿಯಂತೆ ಬಂದು ಅಪ್ಪಳಿಸಿದರೆ ಇವರೆಲ್ಲರ ಗತಿ ಏನು? ಕಿರಾಣಿ ಅಂಗಡಿಯವರು ಹೇಳ ಹೆಸರಿಲ್ಲದೆ ಹೋಗುತ್ತಾರೆ? ದೇಶದ ಆರ್ಥಿಕ ವ್ಯವಸ್ಥೆ ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗಲಿವೆ? ನಾವು ಆಹಾರೋತ್ಪನ್ನಗಳ ಮೇಲಿನ ಹಿಡಿವನ್ನ ಕಳೆದುಕೊಳ್ಳಲಿದ್ದೇವೆ.? ಹೀಗೆ ಮುಂದುವರೆಯುತ್ತಲೇ ಹೋಗುತ್ತವೆ ಟೀಕೆ ಮಾಡುವವರ ಸಾಲುಗಳು.

ವಾಲ್ ಮಾರ್ಟ್, ಟೆಸ್ಕೋ, ಕ್ಯಾರ್ ಫೋರ್ ನಂತಹ ಕಂಪೆನಿ ಅಪಾರ ಪ್ರಮಾಣದ ಬಂಡವಾಳ ಹೊಂದಿವೆ. ಇಂತವರ ಮಧ್ಯೆ ನಮ್ಮ ಬಡ ಕಿರಾಣಿ ವ್ಯಾಪಾರಿಗಳು ಸ್ಪರ್ಧಿಸಲು ಸಾಧ್ಯವೇ? ಆರಂಭದಲ್ಲಿ ಕಡಿಮೆ ಬೆಲೆಗೆ ವಸ್ತುಗಳನ್ನ ಮಾರುವ ಈ ಕಂಪೆನಿಗಳು ನಿಧಾನವಾಗಿ ಗ್ರಾಹಕರನ್ನ ತಮ್ಮತ್ತ ಸೆಳೆಯುತ್ತವೆ. ಆಫರ್ ಆಮಿಷವನ್ನ ನೀಡಿ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನ ಬಿತ್ತಿ, ತಮ್ಮ ವಸ್ತುಗಳನ್ನ ಮಾರುತ್ತವೆ. ಇವರಿಗೆ ಸರ್ಧೆ ಮಾಡಲು ಕಿರಾಣಿ ಅಂಗಡಿಯವರಿಗೆ ಸಾಧ್ಯವೇ ಆಗುವುದಿಲ್ಲ. ಐದಾರು ವರ್ಷಗಳ ಬಳಿಕ ಇವರಿಗೆ ಪೈಪೋಟಿಯೇ ಇರುವುದಿಲ್ಲ. ಹೀಗೆ ಮಾರಾಟದಲ್ಲಿ ಏಕಸ್ವಾಮ್ಯತೆ ಸಾಧಿಸಿದ ಬಳಿಕ ಹಂತ ಹಂತವಾಗಿ ಬೆಲೆಗಳನ್ನ ಏರಿಸಿ, ಲಾಭವನ್ನ ಜೇಬಿಗಿಳಸಲು ಆರಂಭಿಸುತ್ತವೆ.. ಈ ಕಂಪೆನಿಗಳು ಅಮೆರಿಕಾದಲ್ಲಿ ಮಾಡಿದ್ದು ಇದನ್ನೆ. ಭಾರತದಲ್ಲೂ ಸಾಧ್ಯವೇ?

ಆದ್ರೆ, ಒಂದು ಅಂಶವನ್ನ ಗಮನಿಸಬೇಕಿದೆ. ವಾಲ್ ಮಾರ್ಟ್ ನಂತಹ ಕಂಪೆನಿಗಳಿಂದ ಸಣ್ಣ ವ್ಯಾಪಾರಸ್ಥರಿಗೆ ಹಾನಿಯಾಗುತ್ತೆ ಅಂದಾದರೆ, ಮೆಕ್ ಡೋನಾಲ್ಡ್ ನಿಂದ ರಸ್ತೆ ಬದಿಯಲ್ಲಿರುವ ಚಾಟ್ ಮತ್ತು ಟೀ ಶಾಪ್ ಗಳಿಗೆ ಇಷ್ಟೊತ್ತಿಗೆ ಹಾನಿಯಾಗಬೇಕಿತ್ತು. ಕೆಎಫ್ ಸಿ ಬಂದ ಮೇಲೆ ರಸ್ತೆಬದಿಯಲ್ಲಿರುವ ಕೋಳಿ ಅಂಗಡಿಗಳು ಮುಚ್ಚಿಹೋಗಬೇಕಿತ್ತು. ಆದ್ರೆ, ಹಾಗಾಗಲಿಲ್ಲ. ವಾಲ್ ಮಾರ್ಟ್ ನಂತಹ ಕಂಪೆನಿಗಳು ಜರ್ಮನಿ, ಉತ್ತರ ಕೋರಿಯಾದಲ್ಲಿ ಯಶಸ್ಸು ಕಾಣಲಿಲ್ಲ. ಇಂತ ಕಂಪೆನಿಗಳ ಯಶಸ್ಸುಆ ಪ್ರದೇಶದ ಬೌಗೋಳಿಕ, ಆರ್ಥಿಕ, ಸಾಮಾಜಿಕ ಅಂಶಗಳನ್ನ ಅವಲಂಬಿಸಿದೆ. ಅಮೆರಿಕಾದ ಜನರ ಜೀವನ ಶೈಲಿಗೂ, ಅವರ ಆರ್ಥಿಕತೆಗು, ನಮಗೂ ತುಂಬಾ ವೆತ್ಯಾಸಗಳಿವೆ. ಹೀಗಾಗಿ ಭಾರತದಲ್ಲಿ ವಾಲ್ ಮಾರ್ಟ್ ಯಶಸ್ಸು ಕಂಡೆಬಿಡುತ್ತದೆ ಅಂತಾ ಹೇಳೋದು ಕಷ್ಟ. ಆದರೆ, ಆತಂಕವಂತೂ ಇದ್ದೆ ಇದೆ.


ವಿಷ್ಣು ಹೆಗಡೆ , ಕುಮಟಾ

Tuesday, November 13, 2012

ಹಾರುವ 'ಪಾರಿವಾಳ'..!

















ನನ್ನೆದೆ ಗೂಡಿನ ಪಾರಿವಾಳ ನೀನು
ಹಾರಲು ಶಕ್ತಿ ಕೊಟ್ಟವನೆ ನಾನು
ರೆಕ್ಕೆಪುಕ್ಕ ಬಂದಿದ್ದೆ ತಡ
ಮನದ ಮನೆಯಿಂದ ಹಾರಿಹೋದೆ ನೀನು

ಮಧು'ರ ಮಾತಿಗೆ ಮರುಳಾಗಿ ಹೋದೆ
ಮನದ ಬಯಕೆಯ ಅರಸುತ್ತ
ಸೇಡಿನ ಅವಸರದಿ ಕುರುಡಾಗಿ
ಕತ್ತಲಲಿ ಬೆಳಕ ಹುಡುಕಿದೆ
ಜೇನುಗೂಡಿಗೂ ಸಿಹಿ'ಯಾಗದೆ
ಕಹಿಯಾಗಿ ಕತ್ತಲೆಯಾಗಿ ದೂರವಾದೆ !!!

ವಿಷ್ಣು ಹೆಗಡೆ , ಕುಮಟಾ

Sunday, November 11, 2012

ದೀಪಗಳ ದೀಪಾವಳಿ...
















ಬೆಳಗಲಿ ದೀಪ
ಮನದ ಹಣತೆಯಲಿ
ಮರೆಯಾಗಲಿದೆ ಕಹಿಯೆಂಬ ಕತ್ತಲೆ
ದೀಪಾವಳಿಯ ಬೆಳಕಿನಲಿ

ಚಿಂತೆಯೆಂಬ ಚಿತೆಯನ್ನ ಬದಿಗೊತ್ತಿ
ಚೈತನ್ಯದಿ ಮುನ್ನಡೆಯೋಣ
ಹೊಸ ಬದುಕಿಗೆ ಮುನ್ನುಡಿ ಬರೆಯೋಣ
ದೀಪಾವಳಿಯ ಬೆಳಕಿನಲಿ

ದೀಪ ಬೇಕಾಗಿರುವುದು ಮನಕೆ
ಬಾಳ ದಾರಿಯ ಪಯಣಕೆ
ಬೆಳಗೋಣ ದೀಪವನ್ನ
ದೀಪಾವಳಿಯ ಬೆಳಕಿನಲಿ

ಪಟಾಕಿ, ಸಿಡಿಮದ್ದುಗಳ ಸದ್ದಿನಲಿ
ಕಿವುಡಾಗಿ ಸಾಗಿದೆ ಜೀವನ
ಬೆಳಕಿನಬ್ಬರಕೆ ಕುರುಡಾಗಿದೆ ಕಣ್ಣು
ಹೊಸ ಗಾಳಿ ಬೀಸುತ್ತಾ ?
ದೀಪಾವಳಿಯ ಬೆಳಕಿಲಿ..!

( ಎಲ್ಲರಿಗೂ ದೀಪಾವಳಿಯ ಶುಭಾಶಯ )

ವಿಷ್ಣು ಹೆಗಡೆ, ಕುಮಟಾ

Saturday, November 3, 2012

ಈ ಮನದ ಬಯಕೆ..!















ಕವಲು ದಾರಿಯಲ್ಲಿ ಸಾಗಿದೆ ಜೀವನ
ಅದೊ - ಇದೊ
ಅಲ್ಲೊ - ಇಲ್ಲೊ
ಎಲ್ಲಿ ಬದುಕಬೇಕೆಂಬ ಗೊಂದಲ
ಈ ಮನಕೆ

ಕೈಬೀಸಿ ಕರೆಯುತ್ತಿದೆ ತಾಯಿಪ್ರೀತಿ
ತಂದೆಯ ಉದ್ಯೋಗ
ಕೊನೆಗೂ ಆರಿಸಿಕೊಂಡೆ ಆಯ್ಕೆಯನ್ನ
ಆತುರದ ನಿರ್ಧಾರವಲ್ಲವಿದು
ಯೋಚಿಸಿರುವೆ ಹಗಲಿರುಳು
ನಿದ್ದೆಯಿಲ್ಲದೆ ಕಳೆದಿರುವೆ ಎಷ್ಟೊ ರಾತ್ರಿ
ಮನೆಯಲ್ಲೆ ಬೆಳದಿಂಗಳಾಗುವ ಬಯಕೆ
ಈ ಮನಕೆ

ಸುಂದರ ಗೋಪುರ ಕಟ್ಟಿರುವೆ ಮನದಿ
ಕಲ್ಪನೆಯಲ್ಲಿ ಅರಳಿವೆ ಕನವರಿಕೆಗಳು
ಹತ್ತಾರು ಯೋಜನೆಗಳು
ಊರಿಗೆ ಊರುಗೋಲಾಗುವ ಬಯಕೆ
ಈ ಮನಕೆ

ಎಲ್ಲಿಂದ ಎಲ್ಲಿಗೆ ಪಯಣ
ಸಾಕಾಗಿದೆ ಈ ಪ್ರಯಾಣ
ದೂರದೂರಿನ ಬುದುಕು ಬಲು ಭಾರ
ತಾಯಿಮಡಿಲಲ್ಲಿ ನೆಲೆಯಾಗಬೇಕೆಂಬ ಆಸೆ
ಈ ಮನಕೆ

ಚಿಂತೆಯಿಲ್ಲ, ನಂಬಿಕೆಯಿದೆ
ನನ್ನ ಮೇಲೆ ನನಗೆ
ಜೀವನದಲ್ಲಿ ಗೆಲ್ಲುತ್ತೇನೆಂಬ ಭರವಸೆಯಿದೆ
ಬಾಳ ದೋಣಿಯಲ್ಲಿ ಈಜುತ್ತೇನೆಂಬ ಛಲವಿದೆ
ಈ ಮನಕೆ

ಟೀಕೆಗಳಿವೆ ಹಲವಾರು
ಉತ್ತರಿಸುವೆ ಇಂದಲ್ಲ ನಾಳೆ
ಮಾತಿನಿಂದಲ್ಲ, ಮೌನದಿಂದ

ಇದು ಈ ಮನದ ಬಯಕೆ!

ವಿಷ್ಣು ಹೆಗಡೆ, ಕುಮಟಾ


 

Saturday, October 13, 2012

ಈ ದೇಶದಲ್ಲಿ ಇರೋದು ಒಂದೇ ಎಟಿಮ್!!



ಈ ಜಗತ್ತು ನಿಗೂಢಗಳ ನಾಡು. ಅಚ್ಚರಿಗಳ ಬೀಡು. ಇಂತ ವಿಸ್ಮಯಗಳಲ್ಲಿ ವ್ಯಾಟಿಕನ್ ಸಿಟಿ ಕೂಡಾ ಒಂದು. ಇದು ಜಗತ್ತಿನ ಅತ್ಯಂತ ಸಣ್ಣ ಮತ್ತು ಸ್ವತಂತ್ರರಾಷ್ಟ್ರ. ಇದರ ವಿಸ್ತಾರ ಎಷ್ಟು ಗೊತ್ತಾ? ಬರೀ ಅರ್ಧ ಚದರ್ ಕಿಲೋಮೀಟರ್. ಸುಮಾರು 109 ಹೆಕ್ಟೇರ್. ನಮ್ಮಲ್ಲಿನ ಒಂದು ಗ್ರಾಮ ಅಥವಾ ಹಳ್ಳಿಗಿಂತ ಚಿಕ್ಕದು.! ಈ ದೇಶದ ಜನಸಂಖ್ಯೆ ಬರೀ 800.. ದೇಶ ಇರೋದೆ 109 ಹೆಕ್ಟೇರ್. ಇದ್ರಲ್ಲಿ 23 ಹೆಕ್ಟೇರ್ ಗಾರ್ಡನ್. ಈ ಪುಟ್ಟರಾಷ್ಟ್ರದಲ್ಲಿರೋದು ಒಂದೇ ಒಂದು ಎಟಿಮ್. ಆ ಎಟಿಮ್ ಕೆಲಸ ಮಾಡೋದು ಲ್ಯಾಟಿನ್ ಭಾಷೆಯಲ್ಲಿ. ಹೀಗಾಗಿ ವ್ಯಾಟಿಕನ್ ಸಿಟಿಗೆ ಹೋಗುವ ಮುನ್ನ ಯೋಚನೆ ಮಾಡೋದು ಒಳ್ಳೆಯದು.ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಅಂದ್ರೆ, ನಗರದ ಮಧ್ಯಭಾಗದಲ್ಲಿ ಕ್ರಿಶ್ಚಿಯನ್ ಧರ್ಮಗುರುಗಳು ಇರುವ ದೇವಾಲಯ. ಇದು ಜಗತ್ತಿನಲ್ಲಿಯೇ ಅತಿದೊಡ್ಡ ಚರ್ಚ್. ಈ ಪುಟ್ಟರಾಷ್ಟ್ರದಲ್ಲಿ ಜಗತ್ತಿನಲ್ಲಿಯೇ ಅತಿದೊಡ್ಡ ಚರ್ಚ್ ಇದೆ ಅಂದ್ರೆ ನಂಬ್ಲೆ ಬೇಕು.


ಈ ದೇಶ ಕಾಯೋದೆ ಸೈನಿಕರಿಲ್ಲ. ಇಲ್ಲಿ ಶತ್ರುವಿನ ಎದೆಯನ್ನ ಸೀಳಬಲ್ಲ ಕ್ಷಿಪಣಿಗಳಿಲ್ಲ. ಯುದ್ಧ ಟ್ಯಾಂಕರ್ ಗಳಿಲ್ಲ. ಪೊಲೀಸರಿಲ್ಲ. ಹಾಗಾದ್ರೆ, ದೇಶದ ರಕ್ಷಣೆ ಹೇಗೆ ಅನ್ನುವ ಪ್ರಶ್ನೆ ಉದ್ಭವಿಸುವುದು ಸಹಜವೇ.? ಇಡೀ ದೇಶದ ರಕ್ಷಣೆಯ ಹೊಣೆ ಹೊತ್ತಿರೋದು 300 guardsಗಳು. ಇವರಿಗೆ ಪ್ರತ್ಯೇಕ ಯುನಿಫಾರ್ಮ್ ಇದೆ. ಶಾಂತಿ, ಸುವ್ಯವಸ್ಥೆ , ಕಾನೂನು ಕಾಪಾಡೋದು, ಟ್ರಾಫಿಕ್ ವ್ಯವಸ್ಥೆ ನಿಯಂತ್ರಣ, ಕ್ರೈಮ್ ತನಿಖೆ ಇದೆಲ್ಲ ಇವರ ಹೊಣೆ.. ಪೋಪ್ ರಕ್ಷಣೆಗೆ ಸ್ವಿಸ್ guards ಗಳಿದ್ದಾರೆ.



ಅಲ್ಲಿನ ಸಾರಿಗೆ ವ್ಯವಸ್ಥೆ ಬಗ್ಗೆ ಹೇಳಲೇಬೇಕು. ನಮ್ಮಲ್ಲಿನ ಹಾಗೆ ಟ್ರಾಫಿಕ್ ಸಮಸ್ಯೆ ಇಲ್ಲವೇ ಇಲ್ಲ. ಇಡೀ ದೇಶವನ್ನ ಕಾಲ್ನಡಿಗೆಯಲ್ಲೆ ಸುತ್ತಬಹುದು. ಅಲೆಯಬಹುದು. ದೇಶವನ್ನ ಆವರಿಸಿಕೊಂಡಿದ್ದು ಒಂದೇ ಕಿಲೋಮೀಟರ್ ರಸ್ತೆ. ಅದ್ ಬಿಟ್ರೆ, ರಾಷ್ಟ್ರೀಯ ಹೆದ್ದಾರಿಗಳಿಲ್ಲ. ವಿಮಾನ ನಿಲ್ದಾಣಗಳಿಲ್ಲ. ರೈಲ್ವೆ ವ್ಯವಸ್ಥೆ ಇಲ್ಲ. ಒಂದು ಹ್ಯಾಲಿಪ್ಯಾಡ್ ಇದೆ ಅಷ್ಟೆ.!ರಾಜಕೀಯ ಡೊಂಬರಾಟವೇ ಇಲ್ಲ. ವೋಟ್ ಬ್ಯಾಂಕ್ ರಾಜಕಾರಣ ಇಲ್ಲ. ಎಲ್ಲವನ್ನ ನೋಡಿಕೊಳ್ಳುವುದು ಪೋಪ್. ಸರ್ಕಾರದ ಮುಖ್ಯಸ್ಥರು ಅವರೆ. ಆಡಳಿತ ನೋಡಿಕೊಳ್ಳಲು ಆಡಳಿತವ ವರ್ಗ ಇದೆ. ಆಡಿಳಿತವ ವರ್ಗದ ಅಧಿಕಾರಸ್ಥರನ್ನ ಐದು ವರ್ಷದ ಅವಧಿಗಾಗಿ ಆಯ್ಕೆ ಮಾಡಲಾಗುತ್ತದೆ. ಇವರೆಲ್ಲರಿಗೂ ಪೋಪ್ ಮುಖ್ಯಸ್ಥರು.


ವಿಷ್ಣು ಹೆಗಡೆ, ಕುಮಟಾ

Tuesday, October 9, 2012

ಜಲಯುದ್ಧ...




ಕಾವೇರಿ ಹರಿಯುತ್ತಲೇ ಇದ್ದಾಳೆ. ಆಕೆಗೆ ವಿವಾದಗಳ ಅರಿವಿಲ್ಲ. ಜೀವ ಸಿರಿಯಾಗಿದ್ದೇನೆ ಅಹಂ ಇಲ್ಲ. ಬರಿದಾಗುತ್ತೇನೆ ಎಂಬ ಭಯವಿಲ್ಲ. ಮಳೆಯಾದಾಗ ಮೈದುಂಬಿಕೊಂಡು, ಮಳೆಬಾರದಿದ್ದಾಗ ಸೊರಗಿ ಹರಿಯುತ್ತಲೇ ಇದ್ದಾಳೆ ತಣ್ಣಗೆ, ಮೆಲ್ಲಗೆ..

ಆದ್ರೆ ಕರ್ನಾಟಕ, ತಮಿಳುನಾಡು ಮಧ್ಯೆ ಜಲಯದ್ಧ ಆರಂಭವಾಗಿದೆ. ಜೀವನದಿಗಾಗಿ. ಕಾವೇರಿಯ ನೀರಿಗಾಗಿ. ಆಕೆಯ ಮೇಲಿನ ಹಕ್ಕಿಗಾಗಿ. ರಾಜಕೀಯ ಮೇಲಾಟಕ್ಕಾಗಿ. ಕೆಲವರ ಸ್ವಾರ್ಥಕ್ಕಾಗಿ. ಕಾವೇರಿ ನದಿಪ್ರಾಧಿಕರ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶಿಸುತ್ತಿದ್ದಂತೆ ಕಾವೇರಿ ಕಣಿವೆಯಲ್ಲಿ ಕಾವು. ಸುಪ್ರೀಂ ಕೋರ್ಟ್ ನಿಂದಲೂ ರಾಜ್ಯಕ್ಕೆ ಕಹಿ. ಪ್ರಧಾನಿಯೂ ನೆರವಿಗೆ ಬಾರಲಿಲ್ಲ. ಕಾಂಗ್ರೆಸ್ ಶಾಸಕರು, ಸಂಸದರು, ರಾಜ್ಯದ ಕೇಂದ್ರ ಮಂತ್ರಿಗಳು, ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದ್ರು. ಹೀಗಾಗಿ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ ತಮಿಳುನಾಡಿಗೆ ನೀರು ಬಿಡಲೇ ಬೇಕಾಯಿತು. ಪರಿಣಾಮ ಕಾವೇರಿ ಕಣಿವೆ ಹೊತ್ತಿ ಉರಿಯಿತು. ಪ್ರತಿಭಟನೆಯ ಕಿಡಿ ಈಗ ಬೆಂಕಿಯಾಗಿ ರಾಜ್ಯವನ್ನೇ ಆವರಿಸಿಕೊಂಡಿದೆ. ಮಂಡ್ಯ, ಮೈಸೂರು ಭಾಗದ ರೈತರು ಸಿಡಿದೆದ್ದಿದ್ದಾರೆ. ಸರ್ಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ. ನೀರುಬಿಟ್ಟರೆ ರೈತರ ವಿರೋಧ. ಬಿಡದಿದ್ದರೆ ನ್ಯಾಯಾಂಗ ನಿಂದನೆ ಆರೋಪದ ಭಯ. 

ರಾಜ್ಯ ಇಂತ ಪರಿಸ್ಥಿತಿ ಎದುರಿಸಿದ್ದು ಇದು ಮೊದಲೇನಲ್ಲ. ಬಂಗಾರಪ್ಪ, ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೂ ಇಂತಹದೇ ಪರಿಸ್ಥಿತಿ ಎದುರಾಗಿತ್ತು.ಬರದ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಬಿಡಬೇಕಾದ ಸಂದಿಗ್ದತೆ ಇತ್ತು. ಕಾವೇರಿ ವಿವಾದದ್ದು ಶತಮಾನದ ಸಮಸ್ಯೆ. ಬ್ರಿಟಿಷರ ಕಾಲದಲ್ಲಿ ಆರಂಭವಾದ ಜಲಯುದ್ಧ ಮೈಸೂರು ಮಹಾರಾಜರ ಕಾಲದಲ್ಲೂ ಮುಂದುವರಿದಿತ್ತು. ಈಗಲೂ ಹೊಗೆಯಾಡುತ್ತಲೇ ಇದೆ. ಕಾವೇರಿ ಕೊಳ್ಳದ ಜಲಾಶಯಗಳು ತುಂಬಿದ್ರೆ ಸಮಸ್ಯೆಯಿಲ್ಲ. ಆದ್ರೆ, ಸಮಸ್ಯೆ ಶುರುವಾಗೋದೆ ಕಾವೇರಿಯ ಒಡಲು ಬರಿದಾದಾಗ. ಬರದ ಪರಿಸ್ಥಿತಿ ಬಂದಾಗ..


ಇನ್ನು ಕಾವೇರಿ ವಿವಾದ ರೈತರಿಗೆ ಸಮಸ್ಯೆಯಾದ್ರೆ, ರಾಜಕಾರಣಿಗಳಿಗೆ ವರ. ಅವಕಾಶವಾದಿಗೆ ವೋಟ್ ಬ್ಯಾಂಕ್. ವಿವಾದದಲ್ಲಿ ಪ್ರತಿಬಾರಿಯೂ ರಾಜ್ಯ ಸೋಲುತ್ತಲೇ ಇದೆ. ರಾಜಕೀಯ ಮೇಲಾಟದಲ್ಲಿ ತಮಿಳುನಾಡಿದ ಕೈ ಮೇಲಾಗುತ್ತಿದೆ. ಇದ್ಕೆ ಕಾರಣ ತಮಿಳುನಾಡಿದ ರಾಜಕಾರಣಿಗಳು. ಅಲ್ಲಿನ ಪ್ರಾದೇಶಿಕ ಪಕ್ಷಗಳ ಪವರ್. ಕೇಂದ್ರ ಸರ್ಕಾರದಲ್ಲಿ ಪ್ರತಿ ಬಾರಿಯೂ ತಮಿಳುನಾಡಿನ ರಾಜಕೀಯ ಪಕ್ಷಗಳು ಪಾಲುದಾರರು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ. ಹೀಗಾಗಿ ಅವುಗಳ ಲಾಬಿಯೇ ನಡೆಯುತ್ತವೆ. ಹಾಗಿದ್ದರೆ ಕರ್ನಾಟಕದ ಪರ ನಿಲ್ಲುವವರು ಯಾರು? ಯಾರೂ ಇಲ್ಲ ಅನ್ನೊದು ಕಹಿ ಸತ್ಯ. ಬಿಜೆಪಿಯ ಕೇಂದ್ರದ ವರಿಷ್ಠರೂ ರಾಜ್ಯದ ಪರ ನಿಲ್ಲವುದಿಲ್ಲ. ಮುಂದಿನ ಚುನಾವಣೆಯಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿ ವರಿಷ್ಠರಿಗೆ ಕರುಣಾನಿಧಿ ಅಥವಾ ಜಯಲಲಿತಾ ಕೃಪೆ ಅನಿವಾರ್ಯ. ಹೀಗಾಗಿ ರಾಜ್ಯದ ಕೂಗನ್ನ, ರೈತರ ಆಕ್ರೋಶವನ್ನ, ಆಕ್ರಂದನವನ್ನ ಕೇಳುವವರೆ ಇಲ್ಲ.

ವಿಷ್ಣು ಹೆಗಡೆ, ಕುಮಟಾ

Saturday, October 6, 2012

ಧಾರವಾಹಿಗಳ ಲೋಕ...



 

ದಿನ ಮುಗಿಯುತ್ತಿದ್ದರೂ ಧಾರವಾಹಿಗಳು ಮುಗಿಯುತ್ತಿರಲಿಲ್ಲ. ಬೆಳಿಗ್ಗೆಯಿಂದ ಸಂಜೆತನಕ ಅದೇ ರಾಗ, ಅದೇ ಹಾಡು.ಟೀವಿ ಆನ್ ಮಾಡಿದ್ರೆ ಸಾಕು, ರಾಧಾ, ಸುಕನ್ಯ, ಕಾದಂಬರಿ ಧಾರವಾಹಿ ಪ್ರೋವೋಗಳ ಸುರಿಮಳೆ. "ಎಂತಾ ಕಾಲಬಂತು ನೋಡಿ. ನಮ್ಮ ಕಾಲದಲ್ಲಿ ಹೀಗೆ ಇರ್ಲಿಲ್ಲ. ಈಗಿನ ಧಾರವಾಹಿಗಳೋ ಧರಿದ್ರ ಧರಿದ್ರ" ಅಂತಾ ಕೆಲವರು ಗೊಣಗುತ್ತಿದ್ರೆ, ಹಲವರು ಮೆಗಾ ಸೀರಿಯಲ್ಲುಗಳ ಮೋಡಿಗೆ ಸಿಲುಕಿಕೊಂಡಿದ್ದಾರೆ. ಧಾರವಾಹಿಗಳ ಟಿಆರ್ ಪಿ ಹೆಚ್ಚುತ್ತಲೇ ಇದೆ. ಮೆಗಾಸೀರಿಯಲ್ಲುಗಳ 'ಪುರಾಣ' ಮುಗಿಯುವ ಲಕ್ಷಣ ಕಾಣ್ತಿಲ್ಲ. ಕೆಲವಂತೂ ಸಾವಿರ ಎಪಿಪೋಡ್ ಗಳನ್ನೂ ದಾಟಿ ಮುನ್ನುಗ್ಗುತ್ತಲೇ ಇವೆ. ಅತ್ತ-ಸೊಸೆ ಜಗಳವಾಡುತ್ತಲೇ ಇದ್ದಾರೆ. ಪ್ರೀತಿ-ಪ್ರೇಮ-ದ್ವೇಷ, ಸಂಬಂಧ-ಅನೈತಿಕ ಸಂಬಂಧ,ಮನೆಜಗಳ.. ಹೀಗೆ ಸೆಂಟಿಮೆಂಟ್ ಕಥೆಗಳೇ ಈ ಧಾರವಾಹಿಗಳ ಜೀವಾಳ. ಮಹಿಳೆಯರೇ ವೀಕ್ಷಕರು. ಹೀಗಾಗಿ ಮೆಗಾಸೀರಿಯಲ್ಲು ಗಳಲ್ಲಿ ಮಹಿಳಾ ಪ್ರಧಾನ ಕಥೆಗಳೇ.. ಮಹಿಳೆಯರೇ ಪ್ರಧಾನ ಪಾತ್ರಧಾರಿಗಳು, ಸೂತ್ರಧಾರಿಗಳು..!

ಈ ಧಾರವಾಹಿಗಳಲ್ಲಿ ನಟರ ನಟನೆ ಅಷ್ಟಕಷ್ಟೆ.. ಭಾವನೆಗಳು ಕಡಿಮೆ. ಕೇವಲ ಹಿನ್ನಲೆ ಸಂಗೀತದಲ್ಲೇ ಸನ್ನಿವೇಶವನ್ನಊಹಿಸಿಕೊಳ್ಳಬೇಕು. ಒಂದೇ ಶಾಟ್ ಗಳನ್ನ ವಿವಿಧ ಎಂಗಲ್ ಗಳಲ್ಲಿ ಬೆದರಿಸುವ ಹಿನ್ನಲೆ ಸಂಗೀತದೊಂದಿಗೆ ತೋರಿಸಿದರೆ ಅದು ಶಾಕ್ ಸನ್ನಿವೇಶ.. ಮುಖದಲ್ಲಿ ಸ್ವಲ್ಪ ನಗು ಜೊತೆಗೆ ಹ್ಯಾಪಿ ಟೋನ್ ಇದ್ದರೆ, ಆಗ ಸಂತಸದ ಸಮಯ.. ಇಲ್ಲಿ ಪಾತ್ರಧಾರಿಯ ಭಾವನೆಗಿಂತ, ಹಿನ್ನಲೆ ಸಂಗೀತದಿಂದಲೇ ಪಾತ್ರದ ಭಾವ ತಿಳಿದುಕೊಳ್ಳಬೇಕಾದ ಪರಿಸ್ಥಿತಿ..

ನಮ್ಮ ಅಜ್ಜಿ-ಅಮ್ಮ ಏನಿಲ್ಲವೆಂದರೂ ದಿನಕ್ಕೆ ಇಂತ 10 ಧಾರವಾಹಿಗಳನ್ನ ನೋಡುತ್ತಾರೆ. ಅಂದರೆ 10 ಕಥೆ. ಅದರೊಗಳೊಗೆ ಏನಿಲ್ಲವೆಂದರೂ 40-50 ಉಪಕಥೆಗಳು. ನೂರಿನ್ನೂರು ಪಾತ್ರಗಳನ್ನ ನೆನಪಿಟ್ಟಿಕೊಳ್ಳಬೇಕು. ಧಾರವಾಹಿಗಳನ್ನ ನೋಡಿ ಅನುಭವವಿರುವ ನಮ್ಮ ಅಜ್ಜಿ-ಅಮ್ಮನಿಗೆ ಇದು ಅಷ್ಟು ಕಷ್ಟದ ವಿಚಾರವೇನಲ್ಲ.

ತುಂಬಾದಿನ ನಡೆದುಕೊಂಡು ಬಂದ ಮೆಗಾ ಸೀರಿಯಲ್ಲುಗಳಿಗೆ ಕಥೆ ಮುಖ್ಯವಲ್ಲ. ಹೆಸರೇ ಧಾರವಾಹಿಗಳನ್ನ ನಡೆಸುತ್ತವೆ. ಶಾಂಪು, ಸೋಪುಗಳ ಜಾಹೀರಾತು ತೋರಿಸಿ, ಮಾರಾಟ ಮಾಡಿಸಿ ವ್ಯವಹಾರ ಮಾಡಿಕೊಳ್ಳುತ್ತಾರೆ ನಿರ್ದೇಶಕರು. ಈ ಧಾರವಾಹಿಗಳ ಮಧ್ಯದಲ್ಲಿ ಬರುವ ಜಾಹೀರಾತುಗಳನ್ನ ನೋಡುವ ಮಹಿಳೆಯರೇ ಸಾಮಾನ್ಯವಾಗಿ, ಮನೆಯಲ್ಲಿ ಕುಟುಂಬಕ್ಕೆ ಬೇಕಾದ ಸಾಮಾನುಗಳನ್ನ ಕೊಳ್ಳುವರು. ಹೀಗಾಗಿ ಜಾಹೀರಾತುಗಳು ಬಿಕರಿಯಾಗುತ್ತಿವೆ. ಪ್ರಾಡೆಕ್ಟ್ ಗಳು ಮಾರಾಟವಾಗುತ್ತಿವೆ. ಹೆಣ್ಣಿನ ಕಣ್ಣೀರು ಹಾಕಿಸಿ, ಜಗಳ ಮಾಡಿಸಿ, ಕಥೆಗಳು ಮುನ್ನುಗ್ಗುತ್ತಲೆ ಇವೆ. ಧಾರವಾಹಿಗಳ ಟಿಆರ್ ಪಿ ಹೆಚ್ಚುತ್ತಲೆ ಇದೆ..

ವಿಷ್ಣು ಹೆಗಡೆ, ಕುಮಟಾ


Monday, July 2, 2012

ಯಾಣ, ಸೊಬಗಿನ ತಾಣ..

 ನಿಜಕ್ಕೂ ಖುಷಿಯಿದೆ.. ಹೆಮ್ಮೆಯಿದೆ. ಪ್ರಕೃತಿ ಸೌಂದರ್ಯವನ್ನ ಸವಿಯಬಲ್ಲ ಊರಿನಲ್ಲಿ ಹುಟ್ಟಿದ್ದಕ್ಕೆ.. ನಮ್ಮೂರಿನಿಂದ ಒಂದುಕಡೆ ಸಮುದ್ರ. ಇನ್ನೊಂದು ಕಡೆ ಸಹ್ಯಾದ್ರಿಯ ಹಸಿರು.. ಮತ್ತೊಂದು ದಿಕ್ಕಿನಲ್ಲಿ ಅಘನಾಶಿನಿ ನದಿಯ ಸೊಬಗಿನ ವಯ್ಯಾರ. ಎಷ್ಟೊಂದು ಸುಂದರವಾದ ಊರು..? ವಿಸ್ಮಯ ತಾಣ ಯಾಣ, ಶಿವಕ್ಷೇತ್ರ ಗೋಕರ್ಣ, ಓಂ ಅಕ್ಷರದ ಅಚ್ಚರಿಯ ಓಂ ಬೀಚ್, ಪೋರ್ಚುಗೀಸರ ಕಾಲದ ತದಡಿ ಬಂದರು, ಗತಕಾಲದ ನೆನಪನ್ನ ಸಾರುವ ಮಿರ್ಜಾನ ಕೋಟೆ.. ಒಂದೇ, ಎರಡೆ! ಹತ್ತಾರು ವಿಶೇಷಗಳು.. ಈ ಎಲ್ಲಾ ಸ್ಥಳಗಳಲ್ಲಿ ಅತ್ಯಂತ ಸುಂದರವಾದದ್ದು ಯಾಣ. ಯಾಕಂದ್ರೆ, ಅದು ಪ್ರಕೃತಿಯೇ ಚಿತ್ರಿಸಿದ ಅದ್ಭುತ ಕೆತ್ತನೆ..
ಸೌಂದರ್ಯ ಪ್ರಿಯರಿಗೆ, ಯಾತ್ರಾರ್ಥಿಗಳಿಗೆ, ಚಾರಣಿಗರಿಗೆ ಬೆಸ್ಟ್ ಸ್ಪಾಟ್. ದಟ್ಟ ಕಾಡು, ಕಪ್ಪು ಮಣ್ಣಿನ ನಡುವೆ ಸಹಜ-ಸುಂದರವಾಗಿ ಅರಳಿನಿಂತ ಕಲ್ಲಿನ ಶಿಖರಗಳು, ಅಕ್ಕಪಕ್ಕದಲ್ಲಿ ಹರಿಯುವ ಸಣ್ಣಸಣ್ಣ ಝರಿಗಳು, ಹಕ್ಕಿ ಪಕ್ಷಿಗಳ ಚೀರಾಟ, ಬದುಕಿನ ಜಂಟಾಟವನ್ನ ಮರೆಸುತ್ತವೆ.. ಅಲ್ಲಿನ ಬೃಹದಾಕಾರದ ಶಿಲಾರೂಪವನ್ನ ನೋಡಿದರೆ, ಎಂಥವರು ಪ್ರಕೃತಿಯ ಮಹಾ ಆಕೃತಿಗೆ ತಲೆ ಬಾಗಿಸಲೇ ಬೇಕು,
ಕಾಲಿದಾರಿಯಲ್ಲಿ ನಡೆದು ಗಣೇಶ ದೇವಸ್ಥಾನವನ್ನ ದಾಟಿ, ಮುಂದಕ್ಕೆ ಹೋಗುತ್ತಿದ್ದಂತೆ ಎದುರಾಗೋದು ಮೋಹಿನಿ ಶಿಖರ. ಸುಣ್ಣದ ಕಲ್ಲಿನಿಂದ ನಿರ್ಮಿತವಾದ ಈ ಶಿಖರ ಮೊದಲ ನೋಟದಲ್ಲೇ ಪ್ರವಾಸಿಗರ ಹೃದಯದಲ್ಲಿ ಅಚ್ಚೊತ್ತಿಬಿಡುತ್ತದೆ. ಅಲ್ಲಿಂದು ಮೆಟ್ಟಿಲುಗಳನ್ನ ಏರುತ್ತಾ, ಮುಂದೆ ಸಾಗಿದೊಡನೆ ಕಾಣುವುದೇ ಭೈರವೇಶ್ವರ ಶಿಖರ. ಇಲ್ಲೆ ಸ್ವಲ್ಪ ಒಳಗಡೆ ಇದೆ ಭೈರವೇಶ್ವರ ದೇವಾಲಯ. ಅಲ್ಲೊಂದು ಬೃಹತ್ ಬಂಡೆಯ ಕೆಳಗೆ ತಾನೆಗೆ ಮೂಡಿಬಂದ ಶಿವಲಿಂಗ ಎರಡು ಮೀಟರ್ ಉದ್ದವಿದೆ. ವಿಶೇಷ ಅಂದ್ರೆ, ಈ ಶಿವಲಿಂಗದ ಮೇಲೆ ಸದಾ ನೀರು ಬೀಳುತ್ತಿರೋದು. ಬಿರುಬೇಸಿಗೆಯಲ್ಲೂ ನೀರು ಮಾತ್ರ ಬತ್ತುವುದಿಲ್ಲ. ಆ ಬೃಹತ್ ಶಿಖರದ ಮೇಲೆ ನೀರು ಎಲ್ಲಿದೆಯೋ? ಅದು ಎಲ್ಲಿಂದ ಬಂದು ಶಿವನ ತಲೆಯ ಮೇಲೆ ಬೀಳುತ್ತೊ? ಇದು ಉತ್ತರ ಸಿಗದ ಪ್ರಶ್ನೆ. 
ಅದೆಲ್ಲ ಎನೇ ಇರ್ಲಿ, ಮುಗಿಲೆತ್ತರಕ್ಕೆ ಬೆಳೆದು ನಿಂತ ಗಿಡಿ-ಮರಗಳು, ಶಿಲಾ ಶಿಖರಗಳು, ಎಲ್ಲೆಂದರಲ್ಲಿ ಕಂಡುಬರುವ ಜಲಧಾರೆಗಳು, ದೂರದಲ್ಲೆಲ್ಲೊ ಕೇಳಿಸುವ ಕಾಡುಪ್ರಾಣಿಗಳ ಕೂಗು, ಯಾಣದ ಯಾನವನ್ನ ಅವಿಸ್ಮರಣೀಯಗೊಳಿಸುತ್ತವೆ. ಅಲ್ಲಿನ ಭವ್ಯತೆಯನ್ನ ಕಂಡ ಪ್ರವಾಸಿಗನಿಗೆ ದಣಿವಿನ ಅರಿವೇ ಆಗುವುದಿಲ್ಲ.

ವಿಷ್ಣು ಹೆಗಡೆ, ಕುಮಟಾ

Sunday, June 24, 2012

ಐಪಿಎಲ್ ನಿಂದ ಯುರೋಕಪ್ ಗೆ..!





ಸಭ್ಯರ ಆಟದಲ್ಲಿ  ಅಸಭ್ಯ ವಾಸನೆಯಿಂದಾಗಿ ದಿನಕಳೆದಂತೆ 'ಮಿಲೆನಿಯರ್ ಬೇಬಿ ಐಪಿಎಲ್' ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ.. ಇದ್ಕೆ ತಾಜಾ ಉದಾಹರಣೆ ಐಪಿಎಲ್ 5ನೇ ಸೀಸನ್.. ಮ್ಯಾಚ್ ಫಿಕ್ಸಿಂಗ್, ಪುಂಡ `ಪೋಮರನ' ಅತ್ಯಾಚಾರ ಆಟ, ಪುಣೆ ಆಟಗಾರರ ರೇವ್ ಪಾರ್ಟಿ ರಂಪಾಟ, ವಾಂಖೇಡೆಯಲ್ಲಿ 'ಡಾನ್' ದಾದಾಗಿರಿ.. ಹೀಗೆ ಈ ವಿವಾದಗಳ ಸರಮಾಲೆ ಕ್ರಿಕೆಟ್ ಹೆಸರಿಗೆ ಕೆಸರೆರಚಿವೆ. ಹೀಗಾಗಿ ಕೆಲ ಅಭಿಮಾನಿಗಳು ಫುಟ್ಬಾಲ್ ಕಡೆ ವಲಸೆ ಹೋಗಿದ್ದಾರೆ. ರೋಗಿ ಬಯಸಿದ್ದು ಹಾಲು ಹಣ್ಣು, ವೈದ್ಯರು ಹೇಳಿದ್ದು ಹಾಲು ಹಣ್ಣು ಎಂಬತೆ ಈಗ 'ಯುರೋಕಪ್ ಫುಟ್ಬಾಲ್' ಹಬ್ಬ. 16 ಯುರೋಪಿನ್ ದೇಶಗಳ ನಡುವೆ ನಡೆಯುವ ಈ ಚಾಂಪಿಯನ್ ಶಿಪ್, ಕ್ರಿಕೆಟ್ ನ್ನ ಮೀರಿಸುವ ರೋಚಕತೆ ಕೊಡುತ್ತಿದೆ. ಒಂದೂವರೆ ಗಂಟೆಗಳ ಕಾಲ 22 ಆಟಗಾರರು, ಕಾಲ್ಚಳಕ ತೋರುತ್ತಾ, ಜಾಣ್ಮೆ, ಚುರುಕು, ಹೊಂದಾಣಿಕೆಯೊಂದಿಗೆ ಪ್ರದರ್ಶನ ನೀಡುವುದೇ ಒಂದು ರೋಮಾಂಚನ ಅನುಭವ. ಆಟಗಾರರ ಕಾಲಿಗೆ ಸಿಕ್ಕ ಕಾಲ್ಚೆಂಡಿನ ಓಟ-ಹಾರಾಟವನ್ನ ನೋಡುತ್ತಿದ್ದಂತೆ ನೋಡುಗರಿಗೂ ಎದ್ದೆದ್ದು ಕುಣಿಯುವ ಮನಸ್ಸು. ಆಟದ ನಿಯಮ ಗೊತ್ತಿಲ್ಲದಿದ್ರು ಆಕರ್ಷಿಸುವ ಆಟವಿದು.. ಗೋಲ್ ಆದಾಗ, ಗೋಲ್ ಕೀಪರ್ ಗೋಲ್ ತಡೆದಾಗಿನ ರೋಚಕತೆಯೇ ಬೇರೆ..


ಇನ್ನು ಗ್ಲಾಮರ್ ವಿಷ್ಯಕ್ಕೆ ಬಂದ್ರೆ ಐಪಿಎಲ್ ಗಿಂತ  ಒಂದು ಕೈ ಮೇಲೆ ಯುರೋಕಪ್.. ಇಡೀ ಕ್ರೀಡಾಂಗಣದ ತುಂಬಾಲ್ಲಾ ಅಭಿಮಾನಿಗಳ ಭಿನ್ನ-ವಿಭಿನ್ನ ಡ್ರೆಸ್ ಗಳು, ಚಿತ್ರ-ವಿಚಿತ್ರ ಭಂಗಿಗಳು, ಬಣ್ಣ-ಬಣ್ಣದ ಪ್ಲಾಗ್ ಗಳು.. ಹಾಗ್ ನೋಡಿದ್ರೆ, ಫುಟ್ಬಾಲ್ ಅಭಿಮಾನಿಗಳು ತುಂಬಾನೇ ಡಿಫರೆಂಟ್.. ಗೌರಮ್ಮನ ತರ ಡ್ರೆಸ್ ತೊಟ್ಟು ಮೈದಾನಕ್ಕೆ ಬರೋದಿಲ್ಲ.. ಅರೆನಗ್ನ ಬಟ್ಟೆ ತೊಟ್ಟು, ಮೈಗೆಲ್ಲಾ ಪೇಂಟ್ ಬಡಿದುಕೊಂಡು ಸ್ಟೇಡಿಯಂಗೆ ಬರ್ತಾರೆ.. ಆಟ ನೋಡಲು ಬಂದ ಸಭ್ಯ ಅಭಿಮಾನಿಗಳಿಗೂ ಇವರ ಮೈಮಾಟ ನೋಡಲೇ ಬೇಕಾದ ಸ್ಥಿತಿ ಬಂದಿದೆ. ಆದ್ರು, ಇವರ ಫುಟ್ಬಾಲ್ ಪ್ರೀತಿಯನ್ನ , ಚಿಯರ್ ಮಾಡುವ ರೀತಿಯನ್ನ ಮೆಚ್ಚಲೇಬೇಕು..

ವಿಷ್ಣು ಹೆಗಡೆ, ಕುಮಟಾ

Monday, May 14, 2012

ಸಂತೆಯ ಸಂತಸ






ಮೊನ್ನೆ ಬಿಗ್ ಬಝಾರ್ ಗೆ ಹೋಗಿದ್ದೆ. ಭಾನುವಾರ ಆಗಿದ್ರಿಂದ ಜನವೋ ಜನ. ಕಾಲಿಡ್ಲಿಕ್ಕು ಜಾಗ ಇರ್ಲಿಲ್ಲ. ಎಲ್ಲರಂತೆ ತಳ್ಳಿಕೊಂಡು, ಟ್ರಾಲಿಯನ್ನ ದೂಡುತ್ತಾ ಮುಂದೆ ಸಾಗುತ್ತಿದ್ದೆ. ಹಣ ಪಾವತಿ ಮಾಡುವವನ ಬಳಿ ಹನುಮಂತನ ಬಾಲದಂತೆ ಕ್ಯೂ ಬೆಳೆದಿತ್ತು. ನನಗೂ ಅವತ್ತು ಅವಸರ ಏನೂ ಇರ್ಲಿಲ್ಲ. ಸುಮ್ಮನೆ ಅಲ್ಲಿ, ಇಲ್ಲಿ ನೋಡುತ್ತಾ ನಿಂತಿದ್ದೆ. ಅತ್ತಿತ್ತ ನೋಡಿ ಬೇಸರ ಕಳೆದ ನಂತ್ರ ನನ್ನ ಗಮನ ಬಿಲ್ಲಿಂಗ್ ಕೌಂಟರ್ ನತ್ತ ಬಿತ್ತು. ವಿಶೇಷ ಅಂದ್ರೆ, ಕೌಂಟರ್ ಬಾಯ್ ಯಾರಿಗೂ ಚೇಂಜ್ ಕೊಡುತ್ತಿರ್ಲಿಲ್ಲ. ಹೀಗೆ ಒಂದು, ಎರಡು ರೂಪಾಯಿ ಕಡಿಮೆ ಸಿಕ್ಕಿದ್ರು, ಯಾರು ಪ್ರಶ್ನಿಸುತ್ತಿರಲಿಲ್ಲ.. ಯಾಕಂದ್ರೆ, ಅವ್ರೆಲ್ಲ ಹೈಕ್ಲಾಸ್ ಪೀಪಲ್.. ಇದನ್ನ ಚೆನ್ನಾಗಿ ಅರಿತಿದ್ದ ಆತ ಎಲ್ಲರಿಗೂ ಸರಿಯಾಗೆ ಚಳ್ಳೆಹಣ್ಣು ತಿನಿಸುತ್ತಿದ್ದ. ಇದು ಒಂದೆರಡು ರೂಪಾಯಿನ ವಿಷ್ಯವಲ್ಲ.. ಕಾರ್ಪೋರೇಟ್ ಕಂಪೆನಿಗಳು ಯಾವ ರೀತಿ ಸುಲಿಗೆ ಮಾಡುತ್ತಿದೆ ಅನ್ನೋದ್ಕೆ ಒಂದು ಉದಾಹರಣೆ ಅಷ್ಟೆ.

ಅದೇ ಕಿರಾಣಿ ಅಂಗಡಿಗಳಿಗೆ ಹೋದ್ರೆ ಈ ರೀತಿ ಮೋಸ ಕಡಿಮೆ. ಚೇಂಜ್ ಇದ್ದರೆ ಅಂಗಡಿಯಾತ ಕೊಡುತ್ತಾನೆ. ಇಲ್ಲ ಅಂದ್ರೆ, ಕೊಡುವ ದುಡ್ಡಿಗೆ ಸಮನಾಗಿ ಅಟ್ಲೀಸ್ಟ್ ಚಾಕಲೇಟ್ ಆದ್ರು ಕೊಟ್ಟು ತನ್ನ ನೀತಿ , ಸ್ವಾಭಿಮಾನವನ್ನ ಮೆರೆಯುತ್ತಾನೆ. ಅದೇ ರೀತಿ ಸಣ್ಣಪುಟ್ಟ ತರಕಾರಿ ಅಂಗಡಿಗಳಿಗೆ ಹೋದ್ರೆ, ಬೇವಿನ ಸೊಪ್ಪು ಅಥವಾ ಕೊತ್ತುಂಬರಿ ಸೊಪ್ಪು ಕಾಂಪ್ಲಿಮೆಂಟರಿಯಾಗಿ ಸಿಗುತ್ತೆ.. ಜೊತೆಗೆ ಡಿಸ್ಕೌಂಟಿನ ಖುಷಿ ಬೇರೆ. ಸಾಮಾನ್ಯವಾಗಿ ಇಂಥ ಅಂಗಡಿಗಳಲ್ಲಿ ಬರೀ ವ್ಯಾಪಾರ ನಡೆಯುವುದಿಲ್ಲ. ಮನೆಯ ಸುದ್ದಿ, ಕಾರ್ಯಕ್ರಮ, ಸುಖ ದು:ಖ ಮಾತಾಡಿಕೊಂಡು ವ್ಯಾಪಾರ ನಡೆಯುತ್ತದೆ. ಕೆಲ ಹಳ್ಳಿಗಳಲ್ಲಿ ಇದನ್ನ ಕಾಣಬಹುದು..

ಆದ್ರೆ, ಇಂದು ದೊಡ್ಡ ಮಳಿಗೆಗಳಲ್ಲಿ ಕ್ಯೂ ನಿಂತು, ಮುಖ ಊದಿಸಿಕೊಂಡು, ಹಣ ಲೆಕ್ಕ ಮಾಡುತ್ತಾ ನೋಡಿದ್ರೆ ನಗು ಬರುತ್ತೆ. ಇಂತಾ ಮಾಲ್ ಗಳಿಗಿಂತ ನಮ್ಮ ಹಳೆಯ ಮಾರ್ಕೆಟ್ ಗಳು, ಸಂತೆಗಳು ಹೆಚ್ಚು ಮೋಜಿನದು. ಸಂತೆಯಷ್ಟು ಜೀವಂತಿಕೆಯ ಮಾರ್ಕೆಟ್ ನ್ನ ಎಲ್ಲಿಯೂ ನೋಡಿಲ್ಲ. ಗಂಡಸರು, ಹೆಂಗಸರು, ಮುದುಕರು, ಮಕ್ಕಳು ಹೀಗೆ ಎಲ್ಲರೂ ಕೂತಿರುವ ಸಂತೆಯಲ್ಲಿ ತಿರುಗಾಡೋದೆ ಗಾಢ ಅನುಭವ. ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ತನ್ನ ಮಾಲನ್ನ ಮಾರಾಟ ಮಾಡಲು ಯತ್ನಿಸುತ್ತಾ, ಜನರನ್ನು ಕೂಗುತ್ತಾ, ತಕ್ಕಡಿಯಲ್ಲಿ ತೂಗುತ್ತಾ ಇರುತ್ತಾರೆ. ಪಾತ್ರೆ, ಬಟ್ಟೆ-ಬರೆ ತರಕಾರಿ, ಸೊಪ್ಪು, ಗುರುತಿನವರ ಭೇಟಿ, ಸಣ್ಣಪುಟ್ಟ ಕಲಹ, ನಲಿವು, ಹೀಗೆ ವೈವಿಧ್ಯದಿಂದ ಕೂಡಿರುತ್ತೆ ಸಂತೆ. ಆದ್ರೆ, ಮಹಾಮಳಿಗೆಗಳಲ್ಲಿ ಭಾವನಾ ರಹಿತ ಮುಖಗಳನ್ನ ಹೊತ್ತುನಿಂತು ಲೆಕ್ಕಹಾಕುವ ಜಡಶರೀರಗಳು ಮಾತ್ರ ಕಾಣುತ್ತೆ. ಎಲ್ಲಾ ವಸ್ತುಗಳು ಒಂದೆಕಡೆ ಸಿಗುತ್ತೆ ಮತ್ತು ರೇಟ್ ಕಮ್ಮಿ ಇರುತ್ತೆ ಅಂತಾ ಮಾಲ್ ಗಳಿಗೆ ಹೋಗುತ್ತೇವೆ. ಜೊತೆಗೆ ಸ್ಪೆಷಲ್ ಆಫರ್ ಗಳು, ಲಕ್ಕಿ ಗಿಫ್ಟ್ ಗಳು ನಮ್ಮನ್ನ ಅಲ್ಲಿಗೆ ಸೆಳೆಯುತ್ತೆ. ಆಕರ್ಷಕವಾಗಿ ಕಂಡ ಅನೇಕ ವಸ್ತುಗಳನ್ನ ನಮಗೆ ಅರಿವಿಲ್ಲದಂತೆ ಖರೀಸಿಸುತ್ತೆವೆ. ನಮಗರಿಯದೇ ಜೇಬು ಖಾಲಿ.! ಟ್ರಾಲಿಯನ್ನ ತುಂಬಿಸಿಕೊಂಡು ಏದುರುಸಿರು ಬಿಡುತ್ತಾ, ತಾತ್ಕಾಲಿಕವಾಗಿ ತೃಪ್ತಿ ಹೊಂದುತ್ತಾ, ಬಿಲ್ಲಿಂಗ್ ಕೌಂಟರ್ ನಲ್ಲಿ ಗಂಟೆಗಟ್ಟಲೇ ಕಾಯುತ್ತೇವೆ. ಕೊಳ್ಳುಬಾಕ ಸಂಸ್ಕೃತಿಯಲ್ಲಿ ಇದೆಲ್ಲಾ ಕಾಮನ್. ಆದ್ರೆ, ಸಂತೆ ಸಂಸ್ಕೃತಿಯ ಮಜಾವೇ ಬೇರೆ.

ವಿಷ್ಣು ಹೆಗಡೆ, ಕುಮಟಾ



ಇವರೇಕೆ ಹೀಗೆ..?



ಜಗತ್ತೇ ಒಂದು ಅಚ್ಚರಿ. ಆದ್ರೆ, ಈ ಅಚ್ಚರಿಯೊಳಗೊಂದು ಅಚ್ಚರಿ ಅಂದ್ರೆ "ವೆರೈಟಿ" ಜನರು. ಸಹೃದಯಿ, ಸಮಚಿತ್ತ, ವಿವೇಕವಂತ ಮಾತುಗಾರರು.. ಇವರು ಯಾರಿಗೆ ತೊಂದರೆ ಕೊಡುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಅಂತಾ
ಸುಮ್ಮನಿರುತ್ತಾರೆ. ಇನ್ನು ಕೆಲವರಿದ್ದಾರೆ. ಅವರಿಗೆ ತಾವು ಒಳ್ಳೆಯವರೆಂದು ಕರೆಸಿಕೊಳ್ಳಬೇಕು. ಹಾಗೆ ಕರೆಸಿಕೊಂಡರೆ ಅವರಿಗೆನೋ ಖುಷಿ..ಸಮಾಧಾನ. ಈ ರೀತಿಯ ಮನಸ್ಥಿಯವರದ್ದೆ ಒಂದು ವರ್ಗ.


ಇನ್ನೊಂದು ವರ್ಗ ಇದೆ. ತರಲೆ-ತಿಕ್ಕಲು ಜನಗಳು. ಚುಡಾಯಿಸುವ-ಬೆದರಿಸುವ ಪುಂಡರು. ವಾಚಾಳಿಗಳು. ಕುಟೀಲ ಬುದ್ಧಿಯ ಚಾಡಿಕೋರರು. ನಿಂದಕರು.. ಕೊಂಕು-ವಕ್ರ ನುಡಿಗಳ ವಕ್ರಿಗಳು. ಈ ರೀತಿಯ ಸ್ವಭಾವವಿರುವ ಎರಡನೇ ವರ್ಗದ ಜನರು ತುಂಬಾ ಡೇಂಜರಸ್.. ಇಂದಿನ ದಿನಗಳಲ್ಲಿ ಇಂಥವರೆ ಜಾಸ್ತಿ. ಎಲ್ಲಿ ಹೋದ್ರು ಇವ್ರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.. ಬೇಡಬೇಡವೆಂದ್ರು ಗಂಟು ಬೀಳುತ್ತಾರೆ. but, ಇವರ ಮಧ್ಯೆ ಜೀವಿಸುವುದು ಸುಲಭವೂ ಅಲ್ಲ..!!



ವಿಷ್ಣು ಹೆಗಡೆ, ಕುಮಟಾ

Wednesday, May 2, 2012

ವೇಷ - ವಿಶೇಷ



ಕ್ರೈಸ್ತ್ ಕಾಲೇಜಿನ ಒಳಗಡೆ ಹೋದ್ರೆ ಸಾಕು, ವಿಚಿತ್ರ ಸ್ಟೈಲ್ ಕಣ್ಣಿಗೆ ತಟ್ಟುತ್ತೆ. ಒಂದ್ ರೀತಿ, ಲೇಟೆಸ್ಟ್ ಫ್ಯಾಶನ್ ಶೋ ರೂಮ್ ಅದು.. ಇಡಿ ಬೆಂಗಳೂರಿನ ಬಟ್ಟೆ ಅಂಗಡಿಗಳನ್ನ ಸುತ್ತಾಡ್ರು, ಇದನ್ನೆಲ್ಲ ನೋಡ್ಲಿಕ್ಕೆ ಸಾಧ್ಯನೇ ಇಲ್ಲ ಬಿಡಿ.! ಏನುಂಟು, ಏನಿಲ್ಲ.
ಎಲ್ಲಾ ರೀತಿಯ, ಎಲ್ಲಾ ತರದ "ವೇಷ-ವಿಷೇಶಗಳ" ದರ್ಶನ ಒಮ್ಮೆಲೆ. ಮೊನ್ನೆ ಅಲ್ಲಿನ ಏಟಿಎಮ್ಗೆ ಹೋದಾಗ ತೀರಾ ವಿಚಿತ್ರ
ಅನಿಸಿದ್ದು, ಡ್ರೆಸ್ ಗಳು.. ಈ ರೀತಿಯ ಸ್ಟೈಲ್ ಕೂಡಾ ಇದ್ಯಾ ಅಂತಾ ಗೊತ್ತಾಗಿದ್ದು ಅಂದೇ. ಕೆಲ ಯುವತಿಯರು ಮೈಮೇಲೆ ಬಟ್ಟೆ ಹಾಕಿದ್ರು ಅನ್ನೊದೆ ಗೊತ್ತಾಗ್ತಿರ್ಲಿಲ್ಲ. ಅಷ್ಟು ಚಿಕ್ಕದು. ಇವ್ರನ್ನ ನೋಡಿದ್ರೆ ಮಲ್ಲಿಕಾ ಶರಾವತ್ ಕೂಡಾ ಬೆಚ್ಚಿ ಬೀಳ್ತಿದ್ರು. ನಿಜಾಗ್ಲು ಒಂದ್ ತರ, ಶೂಟಿಂಗ್ ಸ್ಪಾಟ್ ಅದು.. ಭಿನ್ನ-ವಿಭಿನ್ನ ಕೇಶವಿನ್ಯಾಸ, ಲೇಟೆಸ್ಟ್ ಜೀನ್ಸ್- ಟೀ ಶರ್ಟ್ ಗಳ ಕಾಂಬಿನೇಶನ್, ಸೆಲ್ವಾರ್-ಕುರ್ತಾಗಳ ಬೆಡಗು, ಲೋ ವೆಸ್ಟ್ ಜೀನ್ಸ್ ತೊಟ್ಟವರ ವಯ್ಯಾರ.. ಇದನ್ನೆಲ್ಲ ನೋಡಿ ಸುಸ್ತು.. ಹುಡುಗಿರ ಮಾತ್ ಹಾಗಿರ್ಲಿ.. ಕೆಲ ಹುಡುಗರು ಹುಡುಗಿಯರ "ಎದೆಗಾರಿಕೆಗೆ" ಸಮನಾಗಿ ನಿಲ್ಲುವ ಪ್ರಯತ್ನ ಮಾಡಿದಂತೆ ಕಾಣ್ತಿತ್ತು. ತಾವೇನು ಕಮ್ಮಿ, "ತೋರಿಸೇ" ಬಿಡೋಣ ಅಂತಾ ಡ್ರೆಸ್ ಮಾಡಿಕೊಂಡು ಬಂದಿದ್ರು. ಲೋ ವೆಸ್ಟ್ ಜೀನ್ಸ್ ತೊಟ್ಟು ಉದ್ದೇಶಪೂರ್ವಕವಾಗಿ ಅಂಡರ್ವೇರ್ ಕಾಣೋತರ "ಲೋ ಸ್ಟೈಲ್" ಮಾಡಿದ್ರು..! ಅಂಡರ್ವೇರ್ ಕಾಣಿಸ್ಬೇಕು ಅನ್ನೋದೆ ಅವ್ರ ಹಿಡನ್ ಅಜೆಂಡಾ. ಇದು ಎಂಥ ದಡ್ಡನಿಗಾದ್ರು ಅರ್ಥ ಆಗ್ತಿತ್ತು..
ರಿಪ್ಪಡ್ ಜೀನ್ಸ್ ಭರಾಟೆಯೂ ಜೋರಾಗೆ ಇತ್ತು..( ಹರಿದ ಜೀನ್ಸ್ ) ಜೋಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಕಿಕೊಂಡಿದ್ರಲ್ಲಾ ಅದೇ ರೀತಿ ಜೀನ್ಸ್.. ಕೆಲವರು ಆ ಹರಿದ ಜೀನ್ಸ್ ಮತ್ತಷ್ಟು ಹರಿದುಕೊಂಡಿದ್ರು.. ಕೂದಲು ಕೆದರಿತ್ತು. ಟೀ ಶರ್ಟ್ ಬನಿಯನ್ ಗಿಂತ ಚಿಕ್ಕದಿತ್ತು. ಆದಷ್ಟು ಎಕ್ಸ್ಫೋಸ್ ಮಾಡುವ ಪ್ರಯತ್ನ..! ಇದೆಲ್ಲ ನೋಡಿದ್ರೆ, ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಬೇಕು ಅಂತಾ ಅನಿಸದೆ ಇರದು..


ವಿಷ್ಣು ಹೆಗಡೆ, ಕುಮಟಾ

Thursday, March 22, 2012

ಬೇವು - ಬೆಲ್ಲ



ಇದು ವಿಜ್ಞಾನ ಯುಗ.. ತಂತ್ರಜ್ಞಾನದಿಂದಾಗಿ ಜೀವನ ಸರಳವಾಗಿದೆ. ಸುಂದರವಾಗಿದೆ.. ಆದ್ರೆ , ಆಧುನಿಕ ಜೀವನ ಶೈಲಿಯಿಂದ 'ಒತ್ತಡ' ಎಂಬ ಖಾಯಿಲೆ ಬಳುವಳಿಯಗಿ ಬಂದಿದೆ. ವೇಗದ ಯುಗದಲ್ಲಿ ಸಮಯವೇ ಸಾಲುತ್ತಿಲ್ಲ. 24 ಗಂಟೆಯೂ ಕಡಿಮೆಯೇ. ಕೆಲವರಿಗಂತೂ ಊಟ, ನಿದ್ದೆಗೂ ಟೈಮ್ ಕೊರತೆ..! ಇವುಗಳ ಮಧ್ಯೆ ಸಂಪ್ರದಾಯ, ಸಂಸ್ಕೃತಿ ಉಳಿಯಲು ಹೇಗೆ ಸಾಧ್ಯ..? ಈ ಶರವೇಗದ ಜೀವನಕ್ಕೆ ಸಿಕ್ಕಿ ಹಬ್ಬ-ಹರಿದಿನಗಳು ಧೂಳೀಪಟವಾಗಿವೆ..



ಸುಮಾರು 10 ವರ್ಷಗಳ ಹಿಂದಿನ ಮಾತು.. ಯುಗಾದಿ ಅಂದ್ರೆ ಎಷ್ಟು ಸಂಭ್ರಮ ಇತ್ತು.. ಮನೆ ಮಂದಿಯೆಲ್ಲಾ ಒಟ್ಟಿಗೆ ಸೇರಿ ಹಬ್ಬ ಆಚರಿಸುತ್ತಿದ್ದರು.. ಒಂದು ವಾರದ ಮುಂಚೆಯೇ ತಯಾರಿ.. ಸಿಹಿ ತಿಂಡಿಗಳು ಮನೆಯಲ್ಲೇ ರೆಡಿ.. ಹೊಸ ಬಟ್ಟೆ ತೊಟ್ಟು, ಬೇವು ಬೆಲ್ಲ  ಸವಿಯುತ್ತಾ, ತುಂಬು ಸಂಸಾರದೊಂದಿಗೆ ಹೋಳಿಗೆ ಊಟದ ಸವಿಯನ್ನ ಸವಿಯೋದೆ ಖುಷಿ.. ಸಂಜೆ ಆದ್ರೆ ಸಾಕು ಎಲ್ಲರು ಊರ ದೇವಸ್ಥಾನದಲ್ಲಿ ಸೇರುತ್ತಿದ್ರು. ಅಲ್ಲಿ ಅರ್ಚಕರಿಂದ ಊರಜನಕ್ಕೆ ಯುಗಾದಿ ಫಲ.. ( ವರ್ಷಫಲ ಕೇಳುವ ಸಂಪ್ರದಾಯ ನಮ್ಮೂರಿನಲ್ಲಿ ಈಗಲೂ ಇದೆ ) ಆದ್ರೆ, ಮೊದಲಿನ ಸಂತಸ, ಸಂಭ್ರಮ ಇಲ್ಲ.. ಚದುರಿದ ಕುಟುಂಬದಲ್ಲಿ ಇರೋದು ಮೂರ್ನಾಲ್ಕು ಮಂದಿ. ಗಂಡ ಅಮೆರಿಕದಲ್ಲಿದ್ರೆ, ಹೆಂಡತಿ ಬೆಂಗಳೂರಿನಲ್ಲಿ.. ಮಕ್ಕಳು ಬೇರೆಲ್ಲೊ ಓದುತ್ತಿರುತ್ತಾರೆ. ಮನೆಯಲ್ಲಿ ಅಜ್ಜ, ಅಜ್ಜಿ ಇಬ್ಬರೇ.. ಮನೆ ಜಗುಲಿ ಖಾಲಿ ಖಾಲಿ.. ಕೆಲಸ ಮಾಡಲು ಅಸಹಾಯಕರಾದ ಅವರಿಗೆ ಮಾರ್ವಾಡಿ ಅಂಗಡಿಯ ಸ್ವೀಟೇ ಗತಿ..

ಈಗಂತೂ ಹಾಕೊ ಬಟ್ಟೆಯಿಂದ ಹಿಡಿದು, ತಿನ್ನೊ ಆಹಾರಕ್ಕೆ ವೆಸ್ಟರ್ನ್ ಮೆರಗು. ಕೃತಕ ಜೀವನ. ಒಂದು ರೀತಿಯ ರೆಡಿಮೇಡ್ ಲೈಫ್. ಫ್ಯಾಶನ್ ಹೆಸರಿನಲ್ಲಿ ಆಚಾರ-ವಿಚಾರಗಳನ್ನ ಬದಿಗೊತ್ತಲಾಗಿದೆ. ನಮ್ಮ ಪೂರ್ವಜರು ಸುಮ್ಮನೆ ಆಚಾರ-ವಿಚಾರವನ್ನ ಹೇಳಿಲ್ಲ. ಖಂಡಿತವಾಗಿಯೂ ನಮಗೆ ಶ್ರೇಷ್ಠವಾದುದನ್ನೆ ಹುಡುಕಿಕೊಟ್ಟಿದ್ದಾರೆ. ಅವರು ನಮಗೆ ಬೆಳೆದು ತೋರಿಸಿದ ಅಕ್ಕಿ,ಗೋಧಿ,ರಾಗಿಗಿಂತ ಉತ್ತಮವಾದ ಆಹಾರ ಎಲ್ಲಿದೆ..? ಫಿಜಾ, ಬರ್ಗ್ ಗೂ  ಬಳಸೋದು ಇದನ್ನೇ ಅಲ್ಲವೇ..!
ಬದಲಾವಣೆ ಏನೋ ಸರಿ.. ಆದ್ರೆ, ಆಧುನೀಕತೆಯ ಹೆಸರಲ್ಲಿ, ಸಂಸ್ಕೃತಿಯನ್ನ ಮರೆತರೆ ಹೇಗೆ..? ಹೊಸ ಆವಿಷ್ಕಾರಗಳನ್ನ
ಅನುಸರಿಸೋಣ. ಅವಲಂಬಿಸೋಣ. ಇದ್ರಿಂದ ಮೂಲ ಸಂಸ್ಕೃತಿಗೆ ಧಕ್ಕೆ ಬಾರದಿರಲಿ.. ಹೊಸ ಹಾದಿಯಲ್ಲಿ ಸಾಗುವಾಗ ಹಳೆಯ ನೆನಪುಗಳು ಬೇಡವೇ..?! ನಮ್ಮತನವನ್ನ ಉಳಿಸಿಕೊಳ್ಳುತ್ತಾ, ಮುಂದೆ ಸಾಗುತ್ತಾ ನವಯುಗಾದಿಯನ್ನ ಆಚರಿಸೋಣ..


ವಿಷ್ಣು ಹೆಗಡೆ, ಕುಮಟಾ

Sunday, January 29, 2012

ವಿದೇಶದಲ್ಲಿ ಇಲಿಗಳು..!


ಯುವಕರ ಮೇಲೆ ನಿರೀಕ್ಷೆಯಿತ್ತು.. ಹಿರಿಯರ ಮೇಲೆ ವಿಶ್ವಾಸವಿತ್ತು.. ಅದೃಷ್ಟದ ನಾಯಕ ಗೆಲುವಿನ ನಾವಿಕನಾಗುತ್ತಾನೆ ಅನ್ನೊ ನಂಬಿಕೆಯಿತ್ತು.. ಆದ್ರೆ, ಆ ನಂಬಿಕೆ ಹುಸಿಯಾಗಿದೆ. ಗೆಲುವಿನ ಕನಸುಗಳೊಂದಿಗೆ ಹೋದವರಿಗೆ ಸಿಕ್ಕಿದ್ದು ಬ್ಯಾಕ್ ಟು ಬ್ಯಾಕ್ ಸೋಲು. ಹೋಗುವಾಗ ಹೀರೊಗಳಾಗಿದ್ದವರು ಈಗ ಜೀರೊಗಳಾಗಿದ್ದಾರೆ. 

ವಿದೇಶದಲ್ಲಿ ವಿಶೇಷವಾಗಿ ಸೋಲುವುದು ಟೀಮ್ ಇಂಡಿಯಾಕ್ಕೆ ಹೊಸದೆನಲ್ಲ.. ಅದ್ರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಸಾಧನೆ ಕಳಪೆ. ದೇಶಿಯ ನೆಲದಲ್ಲಿ ಎದುರಾಳಿಗಳ ಮೇಲೆ ಮುಗಿಬೀಳುವ ಹುಲಿಗಳು ಬಿಳಿಯರ ನೆಲದಲ್ಲಿ ಕಾಗದದ ಮೇಲಿನ ಹುಲಿಯೇ. ವಿದೇಶಿ ನೆಲಕ್ಕೆ ಕಾಲಿಟ್ಟ ಕೂಡಲೇ ಆಟಗಾರರ ಪೌರುಷಗಳು ಮಾಯವಾಗುತ್ತೆ. ತಂಡದ ಸಾಮರ್ಥ್ಯ ಕುಗ್ಗುತ್ತೆ. ಹೀನಾಯವಾಗಿ ಸೋಲುತ್ತೆ ತಂಡ.. ಈ ಹಿಸ್ಟರಿ ಈಗ ಆಸ್ಟ್ರೇಲಿಯಾ ಟೂರ್ನಲ್ಲಿ ರಿಪೀಟ್ ಆಗಿದೆ. 64 ವರ್ಷಗಳ ಇತಿಹಾಸದಲ್ಲಿ ಕಾಂಗರೂ ನಾಡಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು ಐದೇ ಬಾರಿ..! ವಿದೇಶದಲ್ಲಿ ಟೀಮ್ ಇಂಡಿಯಾ ಸಾಧನೆಗೆ ಇದೇ ಕೈಗನ್ನಡಿ.

ಈ ಬಾರಿಯ ಆಸಿಸ್ ಟೂರ್ನಿಯಲ್ಲಂತೂ ಹಿರಿಯ ಬಿಗ್ ಬಾಸ್ ಗಳದ್ದು ತೀರಾ ಕಳೆಪೆಯಾಟ.. ದ್ರಾವಿಡ್ ಕವರ್ ಡ್ರೈವ್  ಸೊಬಗು ಸಂಪೂರ್ಣ ಮರೆಯಾದಂತಿತ್ತು.. ಏಳು ಇನ್ನಿಂಗ್ಸ್ ಗಳಲ್ಲಿ ಆರರಲ್ಲಿ ಬೋಲ್ಡ್..! ಇಂತಾ ಮಹಾನ್ ಆಟಗಾರನೊಬ್ಬ ಈ ರೀತಿ ಔಟಾಗಿದ್ದು ಅಚ್ಚರಿಯೇ. ಆಸ್ಟ್ರೇಲಿಯನ್ನರ ದಾಳಿಗೆ 'ಮಹಾಗೋಡೆ' ಛಿದ್ರ ಛಿದ್ರವಾಗಿದ್ದು ಸುಳ್ಳಲ್ಲ..
ಕಾಂಗರೂ ನಾಡಿಗೆ ಕಾಲಿಟ್ಟಿದ್ದೆ ತಡ ಕಲಾತ್ಮಕ ಆಟಗಾರ ಲಕ್ಷ್ಮಣ್ ಕಲೆಗಾರಿಕೆ ಕೂಡಾ ಕಾಣೆಯಾಗಿದೆ.. ಆಪತ್ಪಾಂಧವ ಆಪತ್ತಿಗೆ ಆಗಲೇ ಇಲ್ಲ. 8 ಇನ್ನಿಂಗ್ಸ್ ಗಳಿಂದ ಲಕ್ಷ್ಮಣ್ ಕಲೆಹಾಕಿದ್ದು 155ರನ್.. ಕಷ್ಟದಲ್ಲಿದ್ದ ತಂಡಕ್ಕೆ ಕ್ರಿಕೆಟ್ ದೇವರೂ ನೆರವಿಗೆ ಬರಲಿಲ್ಲ.. 8-9 ತಿಂಗಳಿಂದ ಮಹಾಶತಕದ ಬರ ಎದುರಿಸುತ್ತಿರೊ ಸಚಿನ್, ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಬಲ ಪ್ರದರ್ಶಿಸಲೇ ಇಲ್ಲ.

ಈಗ ಸರಣಿ ಸೋಲಿನ ಬಳಿಕ ಹಿರಿಯರ ತಲೆದಂಡದ ಮಾತುಗಳು ಕೇಳಿಬರುತ್ತಿವೆ. ಆಯ್ಕೆದಾರರು ಅಸ್ತ್ರ ಪ್ರಯೋಗಿಸಿದರೂ ಅಚ್ಚರಿಯಿಲ್ಲ.. ಹಾಗೆನಾದ್ರು ಆದಲ್ಲಿ ಮೊದಲು ಔಟ್ ಆಗೋದು ವಿವಿಎಸ್ ಲಕ್ಷ್ಮಣ್.. ಆದ್ರೀಗ, ದ್ರಾವಿಡ್ ತಾವಾಗಿಯೇ ನಿವೃತ್ತಿಯಾಗುತ್ತಾರೆ ಅನ್ನೊ ರೂಮರ್ ಹರಿದಾಡುತ್ತಿದೆ.. ಈ ಗಾಳಿಸುದ್ದಿ ಹುಸಿಯಾಗಿರಲಿ ಅಂತಾ ಆಶಿಸೋಣ.. ಯಾಕಂದ್ರೆ, ವಿಶ್ವಶ್ರೇಷ್ಠ ಆಟಗಾರನ ಬಲ ಇನ್ನೂ ಕುಗ್ಗಿಲ್ಲ.. ವಿಂಡೀಸ್, ಇಂಗ್ಲೆಂಡ್ ಟೂರ್ನಿಯಲ್ಲಿ  ತಂಡದ ನೆರವಿಗೆ ಬಂದಿದ್ದು ಇದೆ ದ್ರಾವಿಡ್.. ಈ ಸತ್ಯವನ್ನ ಇಷ್ಟು ಬೇಗ ಮರೆತರೆ ಹೇಗೆ..? ದಾಖಲೆ ಪುಟ ತೆರೆದ್ರೆ ಇದು ಅರ್ಥವಾಗುತ್ತೆ. ಕೇವಲ ಒಂದು ಟೂರ್ನಿಯ  ಡಾಟಾ ಇಟ್ಟುಕೊಂಡು, ಒಬ್ಬ ಆಟಗಾರನ ಸಾಧನೆ ಅಳೆಯೋದು ಎಷ್ಟು ಸರಿ..? ಹಾಗಾದ್ರೆ, ಆಸಿಸ್ ನಲ್ಲಿ  ಕಳಪೆ ಪ್ರದರ್ಶನ ನೀಡಿದ ಎಲ್ಲಾ ಆಟಗಾರರಿಗೆ ಇದೇ ಫಾರ್ಮುಲಾ ಅನ್ವಯವಾಗಬೇಕಲ್ಲವೆ..? ಆದ್ರೆ, ಒಬ್ಬನ ತೆಲೆದಂಡ ಕೇಳೋದು ಯಾವ ನ್ಯಾಯ..??

ವಿಷ್ಣು ಹೆಗಡೆ, ಕುಮಟಾ

Tuesday, January 24, 2012

ಮೈ ಡಿಯರ್ 'ಟಾಮಿ'


ಟಾಮಿ... ನಾನು ಸಾಕಿದ ಅತ್ಯಂತ ಪ್ರೀತಿಯ ನಾಯಿ. ನಾನು ಸಾಕಿದ್ದು ಅನ್ನುವದಕ್ಕಿಂತ ತಂಗಿ ಸಾಕಿದ್ದು. ಚಿಕ್ಕಂದಿನಿಂದ್ಲೂ ನನಗೆ ಮುದ್ದಾದನಾಯಿಮರಿ ಅಂದ್ರೆ ಇಷ್ಟ. ಸಾಕುವ ಆಸೆ.. ಆದ್ರೆ, ಅಪ್ಪ ಬಿಡ್ತಿರಲಿಲ್ಲ.. ಕೊನೆಗೂ ಹಠ ಮಾಡಿ ಡಾಬರ್ಮನ್
ನಾಯಿಮರಿಯನ್ನ ಸಾಕಿದೆ. ತರುವಾಗ ಮೂರು ತಿಂಗಳದ್ದು.. ಕಂದುಬಣ್ಣದ್ದು.. ಆಗಲೆ ಬಲಿಷ್ಠ ಕಾಲುಗಳಿಂದ, ತೀಕ್ಷ್ಮ ಕಣ್ಣುಗಳಿಂದ ಅಕ್ಕಪಕ್ಕದ ಮನೆಯವರಿಗೆ ಹೆದರಿಕೆ ಹುಟ್ಟಿಸಿತ್ತು.. ಆದ್ರೆ, ಪುಟ್ಟ ಮರಿಯ ಚೇಷ್ಟೆಗಳನ್ನ ನೋಡಿ, ಎಲ್ಲರಿಗೂ
ಅದ್ರ ಮೇಲೆ ಮುದ್ದು..

ನಾವು ಊಟ ಮಾಡುವ ಮೊದಲು ಅದ್ಕೆ ಊಟ.. ತಿಂಡಿ.. ಚಿಕ್ಕ ತಟ್ಟೆಯಲ್ಲಿ ಹಾಲು ಕುಡಿಯುತ್ತಿದ್ದ ಟಾಮಿ, ನೋಡ
ನೋಡುತ್ತಿದ್ದಂತೆಯೇ ನನ್ನೆತ್ತರಕ್ಕೆ ಬೆಳೆದು ನಿಂತಿತ್ತು. ಕೂಗಿದ್ರೆ, ಸಿಂಹಘರ್ಜನೆ.. ಊರಿಗೆ ಕೇಳ್ತಿತ್ತು.. ಅಪರಿಚಿತರನ್ನ ಕಂಡ್ರೆ ಸಾಕು ಮುಗಿ ಬೀಳುತ್ತಿತ್ತು.. ಹೀಗಾಗಿ ಬೋನಿನ ಸುತ್ತಲೂ ಯಾರೂ ಸುಳಿಯುತ್ತಿರಲಿಲ್ಲ.. ಒಂದು ವರ್ಷದ ಹೊತ್ತಿಗೆ ಟಾಮಿಗೆ ವಿಶೇಷ ಮರ್ಯಾದೆ ಸಿಕ್ಕಿತ್ತು.. ಎಲ್ಲರೂ ಸಲುಗೆ ಬಯಸುತ್ತಿದ್ದರು.. ಹೊತ್ತಿಗೆ ಆರೇಳು ಚಪಾತಿ ಅಥವಾ ಆರೇಳು ದೋಸೆ ಕೊಟ್ಟರೂ ಸಾಕಾಗ್ತಿರ್ಲಿಲ್ಲ..

ಕಾಲೇಜು ದಿನಗಳವು.. ನಾನು ಬೆಳಿಗ್ಗೆ ಹೋದ್ರೆ ಮನೆ ಸೆರೋದು ಸಂಜೆ. ತಂಗಿ ಬರೋದು ಸಾಯಂಕಾಲವೆ.. ಮನೆಯವರ ಪಾಡು ದೇವರೇ ಕೇಳಬೇಕು.. ಯಾರ ಮಾತನ್ನೂ ಕೇಳುತ್ತಿರಲಿಲ್ಲ ಟಾಮಿ.ಎಲ್ಲರನ್ನ ಬೆದರಿಸುತ್ತಿತ್ತು.. ಬೋನಿನಿಂದ ಹೊರಬಿಡುವ ಧೈರ್ಯ ಯಾರಿಗೂ ಇರ್ಲಿಲ್ಲ.. ಪ್ರಯತ್ನ ಮಾಡಿದ ಒಂದಿಬ್ಬರಿಗೆ ಹಲ್ಲಿನ ರುಚಿ ತೋರಿಸಿತ್ತು.. ಇದನ್ನರಿತ ಎಲ್ಲರೂ ಸಹವಾಸವೇ ಬೇಡವೆಂದು ಸುಮ್ಮನಾಗಿದ್ದರು.. ಹೀಗಾಗಿ ನಾಲ್ಕಡಿ ಬೆಳೆದ ಟಾಮಿಯನ್ನ ಸಂಭಾಳಿಸೋದೆ ತಂದೆ, ತಾಯಿಗೆ ಕಷ್ಟವಾಗಿತ್ತು.. ಟಾಮಿಯನ್ನ ಮನೆಯಿಂದ ಹೊರ ಕಳಿಸೋದು ಅನಿವಾರ್ಯವಾಗಿತ್ತು.. ಎಲ್ಲರೂ ಸೇರಿ ಮುದ್ದಿನ ನಾಯಿಯನ್ನ ಮುದ್ದಾಗಿ ಸಾಕುವ ಬೇರೊಬ್ಬರಿಗೆ ಕೊಟ್ಟೆವು.. ಅವರೂ ಬೇರೊಬ್ಬರಿಗೆ ಕೊಟ್ಟಿದ್ದಾರಂತೆ.. ಈಗ ಎಲ್ಲಿದೆಯೊ ಗೊತ್ತಿಲ್ಲ..  ಹೇಗಿದೆಯೋ..?

ವಿಷ್ಣು ಹೆಗಡೆ, ಕುಮಟಾ

 

Saturday, January 21, 2012

ಎದುರುಮನೆ ಹುಡುಗಿಯರು...



ನಮ್ಮ ರೂಮ್ನ ಎದುರುಗಡೆ ಮತ್ತೊಂದು ರೂಮ್ ಇದೆ.. ಮೂವರು ನೇಪಾಳಿಗಳು ಅಲ್ಲಿದ್ದಾರೆ.. ಇಬ್ಬರು ಹುಡುಗಿಯರು, ಒಬ್ಬ ಹುಡುಗ.. ಲಿವಿಂಡ್ ಟುಗೆದರ್ ಅಲ್ಲ, ಲಿವಿಂಗ್ ತ್ರಿಗೆದರ್..! ಸುಮಾರು ಒಂದು ವರ್ಷದಿಂದ ಅದೇ ರೂಮ್ನಲ್ಲಿದ್ದಾರೆ. ಎಷ್ಟೊತ್ತಿಗೆ ಹೋಗ್ತಾರೆ, ಬರ್ತಾರೆ ಅಂತಾ ಯಾರಿಗೂ ಗೊತ್ತಿಲ್ಲ.. ತಿಂಗಳಿಗೆ ಮೂರ್ನಾಲ್ಕು ಬಾರಿ ಮಾತ್ರ ದರ್ಶನ.. ಅದ್ ಬಿಟ್ರೆ, ಯಾವಾಗ್ಲೂ ಡೋರ್ ಕ್ಲೋಸ್.. ಆದ್ರೆ , ಬೆಳಿಗ್ಗೆ ಬಾಗಿಲು ತೆಗೆದ್ರೆ ಸಾಕು ವಿಸ್ಕಿ, ರಮ್, ಬಿಯರ್ ಬಾಟ್ಲಿಗಳು, ಸಿಗರೇಟ್ ಪ್ಯಾಕ್ಗಳು, ರಾಶಿ ರಾಶಿ ತಿಂಡಿ ಪೊಟ್ಟಣಗಳು ಕಣ್ಣಿಗೆ ತಟ್ಟುತ್ತೆ.. ಗಾರ್ಬೇಜ್ ತೆಗೆದುಕೊಂಡು ಹೋಗ್ಲಿಕ್ಕೆ ಬರೋರು, "ಏನಪ್ಪಾ, ಇಷ್ಟು ಗಲೀಜು ಮಾಡ್ತಿರಾ" ಅಂತಾ ಬಯ್ಯೋದು ನಮ್ಗೆ. ನೋಡಿ ಸರ್ ನಾವು ರೂಮ್ನಲ್ಲಿ ಅಡುಗೇನು ಮಾಡಲ್ಲ.. ಪ್ರತಿ ದಿನ ಹೊರಗಡೆನೆ ತಿನ್ನೋದು.. ಇದೆಲ್ಲ ಎದುರುಗಡೆಯ ಮಹಿಮೆ ಅಂತಾ ಹೇಳಿದೆವು.. ಒಂದೆರೆಡು ದಿನ ನಮ್ಮ ಮೇಲೆಯೇ ಸಂಶಯ ಪಟ್ಟ.. ಆದ್ರೆ, ಆಮೇಲೆ ಆತನಿಗೆ ಅರ್ಥವಾಯ್ತು..

ಯಾವಾಗ್ಲೂ ರೂಮ್ನಲ್ಲಿ ರಾಕ್ ಮ್ಯೂಜಿಕ್.. ಗಿಟಾರ್ ಸದ್ದು.. ಎಲ್ಲರಿಗೂ ಡಿಸ್ಟರ್ಬ್ ಆಗೋ ತರ.. ಒಮ್ಮೆ, ರಾತ್ರಿ 12 ಗಂಟೆ..
ಸ್ನೇಹಿತ ಬಾಲು ರೂಮ್ಗೆ ಬಂದಿದ್ದ.. ನಾವಿಬ್ಬರೂ ಊಟ ಮಾಡಿ ಹರಟುತ್ತಾ ಕೂತಿದ್ದೇವು.. ಎದುರುಗಡೆಯ ರೂಮ್ನಿಂದ ತುಂಬಾ ಸೌಂಡ್ ಬರ್ತಿತ್ತು.. ಸುಮ್ಮನಿದ್ದೇವು.. ಆದ್ರೆ, ಪಕ್ಕದ ಮನೆಯವ್ರು ಕೇಳಬೇಕಲ್ಲ.. ಓನರ್ಗೆ ಕಂಪ್ಲೆಂಟ್ ಮಾಡಿದ್ರು.. ನಡುರಾತ್ರಿ ಸಿಟ್ಟಿನಲ್ಲಿ ಬಂದ ಓನರ್, ಅವ್ರ ಪಾರ್ಟಿಯನ್ನ ನೋಡಿ ಕಂಗಾಲು.. ನಾವೂ ಕೂಡಾ.. ಏನಿಲ್ಲ ಅಂದ್ರೂ 10-12 ಮಂದಿ ಅಲ್ಲಿದ್ರು.. ಎಲ್ಲರೂ ಸಿಕ್ಕಾಪಟ್ಟೆ ಕುಡಿದು ರಾಕ್ ಮ್ಯೂಜಿಕ್ಗೆ ಹೆಜ್ಜೆ ಹಾಕ್ತಿದ್ರು.. " ನೋಡಿ, ಎಂಜಾಯ್ ಮಾಡಿ. ಆದ್ರೆ, ನಡುರಾತ್ರಿ ಇಷ್ಟೊಂದು ಗಲಾಟೆ ಮಾಡೋದು ಸರಿಯಲ್ಲ" ಅಂತಾ ಹೇಳಿದ್ದಕ್ಕೆ ಓವರ್ ಮೇಲೆ ರೇಗಿಬಿಟ್ರು.. "ಈ ಇಂಡಿಯನ್ ಪೀಪಲ್ಗಳೇ ಸಿಲ್ಲಿ ಮೈಂಡ್" ಅಂತಾ ಮದಿರೆ ಮತ್ತಿನಲ್ಲಿ ತೇಲುತ್ತಿದ್ದ ಹುಡುಗಿಯೊಬ್ಬಳು ಹೇಳಿದ್ದೆ ತಡ ಓನರ್ ಸಿಟ್ಟು ನೆತ್ತಿಗೇರಿತ್ತು.. ನಡುರಾತ್ರಿಯೇ ಎಲ್ಲರನ್ನ ಹೊರಹಾಕಿದ್ರು.. ಎಷ್ಟೆ ಪ್ರತಿಭಟಿಸಿದ್ರು, ಬೇಡಿಕೊಂಡರೂ ಕೇಳಲೇ ಇಲ್ಲ.. ಆ ಕಡೆ ಮನೆ, ಈ ಕಡೆ ಮನೆಯವ್ರು ಎಲ್ಲಾ ಸೇರಿಬಿಟ್ರು.. ಗಲಾಟೆ ಮಾಡುತ್ತಿದ್ದ ಹುಡುಗರಿಬ್ಬರಿಗೆ ಕಪಾಳಮೋಕ್ಷವೂ ಆಯ್ತು.. ಗೊಣಗುತ್ತಾ, ತೂರಾಡುತ್ತಾ ರಸ್ತೆಯಲ್ಲಿ ಮರೆಯಾದ್ರು..

ಮರುದಿನ ಬೆಳಿಗ್ಗೆ ಆಶ್ಚರ್ಯ..! ಕಾಫಿ ಕುಡಿದು ಬರ್ಬೇಕಾದ್ರೆ ಎದುರುಗಡೆ ರೂಮ್ನ ಬಾಗಿಲು ತೆಗೆದಿತ್ತು.. ಬೇರೆ ಯಾರೋ ಬಂದಿರಬೇಕು ಅಂದ್ಕೊಂಡೆ.. ಇಲ್ಲ.. ಅವರೇ.!! ರಾತ್ರಿ ಕುಡಿದು ಗಲಾಟೆ ಮಾಡಿದವರೆ..! ರೂಮ್ ಖಾಲಿ ಮಾಡ್ಲಿಕ್ಕೆ ಬಂದಿರಬೇಕು ಅಂದ್ಕೊಂಡೆ.. ಎಷ್ಟೊತ್ತಾದ್ರು ಜಾಗ ಖಾಲಿ ಮಾಡ್ಲಿಲ್ಲ.. ಮಧ್ಯಾಹ್ನ ಊಟ ಮಾಡಿ ಆಫೀಸ್ಗೆ ಹೊರಟೆ.. ರಸ್ತೆಯಲ್ಲಿ ಹೋಗುವಾಗ ಅಂಕಲ್ ಹೇಳಿದ್ರು.. ಬೆಳಿಗ್ಗೆ ಬೆಳಿಗ್ಗೆ ಬಂದು ಓನರ್ಗೆ ಸಾರಿ ಕೇಳಿದ್ದಾರೆ.. ಇನ್ಮುಂದೆ ಗಲಾಟೆ ಮಾಡಲ್ಲ ಅಂತಾ ಭರವಸೆನೂ ಕೊಟ್ಟಿದ್ದಾರಂತೆ.. ಅದ್ಕೆ ಓನರ್ ಮತ್ತೆ ರೂಮ್ ಕೊಟ್ಟಿದ್ದಾರೆ ಅಂತಾ ತಿಳಿದು ಸುಮ್ಮನಾದೆ..

ಇಷ್ಟೆಲ್ಲಾ ಆದ್ ಮೇಲೆ ಎದುರುಗಟೆಯ ಕಾಟ ಕಡ್ಮೆಯಾಗಿದೆ.. ಹೊರಗಡೆ ಕಸ ಚಲ್ಲೋದಿಲ್ಲ.. ಮ್ಯೂಜಿಕ್ ಸೌಂಡ್ ಬಾಗಿಲು ದಾಟಿ ಬರುತ್ತಿಲ್ಲ.. ಅಕ್ಕಪಕ್ಕದವರಿಗೂ ನೆಮ್ಮದಿ.. ನಮಗೂ..!

ವಿಷ್ಣು ಹೆಗಡೆ, ಕುಮಟಾ

Friday, January 13, 2012

ಹಳ್ಳಿಯಲ್ಲಿ ದಿಲ್ಲಿ ರಾಜಕೀಯ.!!




ನೆಮ್ಮದಿಯಿತ್ತು. ಶಾಂತತೆಯಿತ್ತು. ಸಂಸ್ಕೃತಿಯಿತ್ತು. ಒಳ್ಳೆಯ ಪರಿಸರ ಇತ್ತು. ಜನ ಕಷ್ಟಪಟ್ಟು ದುಡಿತಿದ್ರು.. ಮಾದರಿ ಊರಾಗಿತ್ತು.. ಈಗ ಎಲ್ಲಾ ಉಲ್ಟಾಪಲ್ಟಾ.. ಕೇವಲ ಆರೇಳು ವರ್ಷದಲ್ಲಿ ಎಷ್ಟೊಂದು ಬದಲಾವಣೆ ಕಂಡಿದೆ ನಮ್ಮೂರು.. ಇದಕ್ಕೆಲ್ಲ ಕಾರಣ, ಕೊಳಕು ರಾಜಕೀಯ.. ಮತಬ್ಯಾಂಕ್ ರಾಜಕಾರಣ. ಶಾಂತಿ-ಸಹಬಾಳ್ವೆಯಿಂದಿದ್ದ ಊರಿನಲ್ಲಿ ದ್ವೇಷದ ಬೀಜವನ್ನ ಬಿತ್ತಿದ್ದು ಪೊಲಿಟಿಕಲ್ ಲೀಡರ್ಗಳು. ಇಂದು ಆ ಬೀಜ, ಹೆಮ್ಮರವಾಗಿ ಬೆಳೆದು ಊರನ್ನೆ ಆವರಿಸಿಕೊಂಡಿದೆ..

ಈಗ ನಮ್ಮೂರ ರಾಜಕೀಯ ದಿಲ್ಲಿ ರಾಜಕೀಯವನ್ನ ಮೀರಿಸುತ್ತೆ..! ಮನೆಗೊಂದು ಪಕ್ಷ ಹುಟ್ಟಿಕೊಂಡಿದೆ.. ಒಬ್ಬ ಲೀಡರ್ ಹಿಂದೆ ನೂರು ಮಂದಿ.. ಈತನ ಸುತ್ತ ಇರೋರೆಲ್ಲಾ ಹೊಗಳು ಭಟರು, ಸಮಯಧಾಕರು. ಮದ್ಯಪ್ರಿಯರು.. ಊರಲ್ಲೀಗ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗಲ್ಲ.. ಒಬ್ಬ, ಮೇಲೇರ ಹೊರಟರೆ ಇನ್ನೊಬ್ಬ ಕಾಲೆಳೆಯುತ್ತಾನೆ.. ಅದನ್ನ ನೋಡಿ ನಗುವವರು ಹತ್ತು ಮಂದಿ.. ಹೀಗಾಗಿ ಈಗ ನಮ್ಮೂರನ್ನ ಅಂತ್ರವಳ್ಳಿ ಅಂತಾ ಕರೆಯೋದಕ್ಕಿಂತ "ಅತಂತ್ರವಾದ ಹಳ್ಳಿ" ಅಂತಾ ಕರೆಯೋದೆ ಸೂಕ್ತ..!!!

ನೆಮ್ಮದಿ ಮಾಯವಾಗಿದೆ. ಶಾಂತತೆ ಕದಡಿದೆ. ಕಷ್ಟಪಷ್ಟು ದುಡಿಯೊ ಜನ ಸೋಮಾರಿಗಳಾಗಿದ್ದಾರೆ.. ರಾಜಕೀಯ ಪುಡಾರಿಗಳು, ಪುಂಡರೇ ತುಂಬಿ ತುಳುಕುತ್ತಿದ್ದಾರೆ.. ಊರು ಅಭಿವೃದ್ಧಿಯಾಗಿಲ್ಲ.. ಲೀಡರ್ಗಳ ಜೇಬು ತುಂಬಿದೆ. ಅವ್ರ ಮನೆಯ ರಸ್ತೆಗಳೆಲ್ಲ ಡಾಂಬರೀಕರಣಗೊಂಡಿದೆ. ಬಡವರು ಇನ್ನೂ ಬಡವರಾಗಿದ್ದಾರೆ.. ಹವ್ಯಾಸಿ ಮದ್ಯಪ್ರಿಯರು ಕುಡಿತವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ..!

ಇಷ್ಟೆಲ್ಲಾ ಹಾಳಾಗ್ಲಿಕ್ಕೆ ಪ್ರಮುಖ ಕಾರಣ ಗ್ರಾಮಪಂಚಾಯತ್ ಎಲೆಕ್ಷನ್.. ಯಾವಾಗ ಪಂಚಾಯತ್ಗೆ 2 ಕೋಟಿ ಅನುದಾನ ಬಂತೊ ಅಂದಿನಿಂದ ಊರ ಚಿತ್ರಣವೇ ಬದ್ಲಾಯಿತು.. ಎಲ್ಲರ ಚಿತ್ತ ಪಂಚಾಯತ್ಗೆ ಹರಿದುಬರುತ್ತಿರೋ ಅನುದಾನದ ಮೇಲೆ ಬಿತ್ತು. ಮೀಸಲಾತಿಯ ಪರಿಣಾಮವಾಗಿ ಶಿಕ್ಷಣದ ಗಂಧಗಾಳಿಯೇ ಇಲ್ಲದ, ಕನಿಷ್ಟ ತಿಳುವಳಿಕೆಯೂ ಇಲ್ಲದ, ಹೆಬ್ಬಟ್ಟಿನ ಪುಡಾರಿಗಳು ಸದಸ್ಯರಾದರು.. ಅಧ್ಯಕ್ಷರಾದರು.. ಇಂತವರ ಕೈಗೆ ಅಧಿಕಾರ ಹೋದ್ರೆ, ಏನಾಗಬೇಡ..? ದೇವರೆ ಗತಿ..!! ಇವರನ್ನ ಬೇಕಾದಂತೆ ಬಳಸಿಕೊಂಡರು ಶಾಸಕರು. ಲೀಡರ್ಗಳು. ಉದ್ಯಮಿಗಳು. ಪ್ರಭಾವಿಗಳು.. ಎಲ್ಲರೂ ಸೇರಿ ಊರನ್ನೇ ಕೊಳ್ಳೆ ಹೊಡೆದ್ರು.. ಜಾತಿಗಳ ಮಧ್ಯೆ ಕಿಚ್ಚು ಹಚ್ಚಿದ್ರು.. ದೊಡ್ಡ ಕಂದಕವನ್ನೆ ಸೃಷ್ಟಿ ಮಾಡಿದ್ರು.. ಇದೆಲ್ಲದರ ಪರಿಣಾಮವಾಗಿ ಅಣ್ಣನಿಗೆ ತಮ್ಮನೆ ಎದುರಾಳಿಯಾದ..! ಒಂದೇ ಮನೆಯಲ್ಲಿ ಎರಡು ಪಕ್ಷ..!!

ಎಲೆಕ್ಷನ್ ಮುಗಿದ ಮೇಲಾದ್ರು ನೆಮ್ಮದಿ ಇದ್ಯಾ.. ಖಂಡಿತಾ ಇಲ್ಲಾ.. ಮತ್ತೆ ಶುರು ದ್ವೇಷದ ರಾಜಕೀಯ. ಒಳಗೊಳಗೆ ಪಿತೂರಿ.. ಎದುರಾಳಿಯನ್ನ ಹೇಗಾದ್ರು ಮಾಡಿ ತುಳಿಯಲೇಬೇಕು ಅನ್ನೊ ಹಠ.. ಒಟ್ಟಿನಲ್ಲಿ ರಾಜಕೀಯ ಚದುರಂಗದಾಟಕ್ಕೆ ಕೊನೆಯೇ
ಇಲ್ಲ. ಊರಿಗೆ ನೆಮ್ಮದಿ ಎಲ್ಲಿ..

ದೇವಸ್ಥಾನದ ವಿಷ್ಯದಲ್ಲೂ ರಾಜಕೀಯ.. ಎರಡು ಮೂರು ಗುಂಪುಗಳ ಜಗಳದಲ್ಲಿ ಬಲಿಪಶುವಾಗಿದ್ದು "ಪೂಜಾರಿ" ಕುಟುಂಬ.. ಸುಮಾರು 15 ವರ್ಷಗಳಿಂದ ದೇವಸ್ಥಾನದಲ್ಲಿದ್ದ ಭಟ್ರನ್ನ ಬಿಡಿಸ್ಲಾಗಿದೆ.. ಎಲ್ಲರೂ ಸೇರಿ ಮಾಡಬೇಕಾದ ವಾರ್ಷಿಕ ಕಾರ್ಯಕ್ರಮದಲ್ಲೂ ಬೀದಿ ಜಗಳ.. ತಮ್ಮದೇ ಮಾತು ನಡೆಯಬೇಕು ಅನ್ನೊ ಅಹಂ.. ಯಾರೂ ಸೋಲಲ್ಲ.. ಯಾರೂ ಗೆಲ್ಲಲ್ಲ.. ಇವರೆಲ್ಲರಿಗೆ ಊರು ಉದ್ಧಾರವಾಗೋದು ಬೇಕಿಲ್ಲ.. ತಮ್ಮ ಬೆಳೆ ಬೆಯಬೇಕಷ್ಟೆ..

ಊರಲ್ಲಿ ಸೋಮಾರಿಗಳ ಸಂಖ್ಯೆ ಜಾಸ್ತಿಯಾಗ್ಲಿಕ್ಕೆ ಪ್ರಮುಖ ಕಾರಣ ಸರ್ಕಾರಿ ಯೋಜನೆ..! ( ಉದ್ಯೋಗ ಖಾತ್ರಿ ) ಯೋಜನೆಯಡಿ ಕೆಲಸಕ್ಕೆ ಹೋದವರಿಗೆ ಹೇಳೋರು, ಕೇಳೋರು ಇಲ್ಲ.. ಬೆಳಿಗ್ಗೆ 10 ಗಂಟೆಗೆ ಹೋದ್ರೆ ಮಧ್ಯಾಹ್ನ 2ಕ್ಕೆ ಕೆಲ್ಸ ಕ್ಲೋಸ್.. ಆಮೇಲೆ ಟೈಮ್ ಪಾಸ್ .. ಕುಡಿದು ಊರು ಸುತ್ತೋದೆ ಕೆಲ್ಸ.. ಅರ್ಧ ಕೂಲಿನೂ ಮನೆ ಸೇರಲ್ಲ.. ಇವ್ರಿಗೆಲ್ಲ ಬುದ್ಧಿ ಬರೋದು ಯಾವಾಗ..? ಊರು ಅಭಿವೃದ್ಧಿಯಾಗೋದು ಎಂದು..?


ವಿಷ್ಣು ಹೆಗಡೆ, ಕುಮಟಾ